ಬೆಂಗಳೂರು, ಫೆ 15 (DaijiworldNews/HR): ಶಾಲಾ, ಕಾಲೇಜಿಗಳಲ್ಲಿ ಹಿಜಾಬ್ ವಿಚಾರ ಆರಂಭವಾಗುತ್ತಿದ್ದಂತೆ ಎರಡು ರಾಷ್ಟ್ರೀಯ ಪಕ್ಷಗಳು ಅದನ್ನು ಚಿವುಟಿ ಹಾಕುವ ಕೆಲಸ ಮಾಡ ಬೇಕಿತ್ತು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ವಿಚಾರ ಆರಂಭ ಆಗುತ್ತಿದ್ದಂತೆಯೇ ಅದನ್ನು ಚಿವುಟಿ ಹಾಕುವ ಕೆಲಸವನ್ನು ಎರಡೂ ರಾಷ್ಟ್ರೀಯ ಪಕ್ಷಗಳೂ ಮಾಡಬೇಕಿತ್ತು. ಆದರೆ ಈಗ ತುಂಬಾ ಬೆಳವಣಿಗೆಗಳಾಗಿವೆ, ಹೀಗಾಗಿ ಕೋರ್ಟ್ ಏನು ತೀರ್ಪು ಕೊಡುತ್ತದೋ ಅದನ್ನು ಒಪ್ಪಬೇಕು ಎಂದಿದ್ದಾರೆ.
ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಈಗ ಒಬ್ಬರು ರಾಜ್ಯಾಧ್ಯಕ್ಷರಾಗಿ ಇದ್ದಾರೆ. ಅವರು ಆರು ಬಾರಿ ಗೆದ್ದವರು. ಅವರನ್ನು ನಾಳೆ ಬೆಳಿಗ್ಗೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ? ಎಂದರು.
ಇನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.