ಗುರುದಾಸ್ಪುರ, ಫೆ 15 (DaijiworldNews/MS): ಪಂಜಾಬ್ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳ ಪ್ರಚಾರದ ಕಾವು ಹೆಚ್ಚಾಗಿದೆ. ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪರ ಪ್ರಚಾರ ಮಾಡಲು ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೋಶಿಯಾರ್ಪುರ ಹಾಗೂ ಗುರುದಾಸ್ಪುರದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಿಸಿ ವಿರೋಧ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಆಮ್ ಆದ್ಮಿ ಪಾರ್ಟಿಯ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಕೋವಿಡ್ ಸಾಂಕ್ರಮಿಕ ಸಮಯದಲ್ಲಿ ಎಎಪಿ ಪಕ್ಷ ಎಲ್ಲಿ ನಾಪತ್ತೆಯಾಗಿತ್ತು? ಎಂದು ಪ್ರಶ್ನಿಸಿದ್ದಾರೆ.
ಎಎಪಿ ಪಕ್ಷದ ಮುಖಂಡ, ದೆಹಲಿ ಸಿಎಂ ಕೇಜ್ರಿವಾಲ್ , ಮೊಹಲ್ಲಾ ಚಿಕಿತ್ಸಾಲಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಕೊವೀಡ್ -19 ಸಾಂಕ್ರಾಮಿಕ ಸಮಯದಲ್ಲಿ ಜನರೊಂದಿಗೆ ನಿಂತವರು ಯುವ ಕಾಂಗ್ರೆಸ್ ಕಾರ್ಯಕರ್ತರು. ಈ ವೇಳೆ AAP ಎಲ್ಲಿ ಕಣ್ಮರೆಯಾಗಿತ್ತು? ಮೊಹಲ್ಲಾ ಚಿಕಿತ್ಸಾಲಯಗಳನ್ನು ನಿರ್ಮಿಸಿ ಜನರ ಸೇವೆಗೆ ನಿಂತಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.
ಇನ್ನು ಪಂಜಾಬ್ ನಲ್ಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ಎರಡು ಕ್ಷೇತ್ರಗಳಿಂದ ಕಣಕ್ಕಿಳಿಸಿದೆ. ಜೊತೆಗೆ ಉತ್ತರಾಖಂಡದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರನ್ನು ಸೇರಿಸಿದೆ. ಫೆಬ್ರವರಿ 20 ರಂದು 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.