ಬೆಂಗಳೂರು, ಫೆ.14 (DaijiworldNews/HR): ಡಬಲ್ ಎಂಜಿನ್ ಸರ್ಕಾರ ನಾಡಿಗೆ ದ್ರೋಹ ಬಗೆದಿದ್ದು, ಸರ್ಕಾರ ರಾಜ್ಯಪಾಲರ ದಿಕ್ಕು ತಪ್ಪಿಸಿ ಅವರ ಮಾತಿನ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿದೆ ಎಂದು ರಾಜ್ಯಪಾಲರ ಭಾಷಣದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿದೆ. ಯಾವುದೇ ನಾಗರಿಕ ಸರ್ಕಾರಕ್ಕೆ ನಿರ್ಧಿಷ್ಟವಾದ ಗೊತ್ತು-ಗುರಿಗಳಿರುತ್ತವೆ. ಆದರೆ ರಾಜ್ಯಪಾಲರ ಭಾಷಣ ಕೇಳಿದ ಮೇಲೆ, ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂದಿದ್ದಾರೆ
ಇನ್ನು ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ. ರಾಜ್ಯಪಾಲರ ಭಾಷಣದಲ್ಲಿ 116 ಪ್ಯಾರಾಗಳಿವೆ. ಅದರಲ್ಲಿ 23 ಪ್ಯಾರಾಗಳು ಕೊರೊನಾ ಮತ್ತು ಪ್ರವಾಹಕ್ಕೆ ಸಂಬಂಧಪಟ್ಟಿವೆ. ಇನ್ನುಳಿದಂತೆ ಸುಮಾರು 30 ಪ್ಯಾರಾಗಳು ಹಳೆಯವು ಮತ್ತು ಭರವಸೆಗಳಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ, ನಿರುದ್ಯೋಗವನ್ನು ಪರಿಹರಿಸಲು ಏನನ್ನೂ ಮಾಡಿಲ್ಲ ಎಂಬುದನ್ನು ಸರ್ಕಾರವೇ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ. ಕಲ್ಯಾಣ ಕರ್ನಾಟಕ ಮಂಡಳಿಗೆ ಸಂಬಂಧಪಟ್ಟ ಹಾಗೆ ಹೆಸರು ಬದಲಾಯಿಸಿದ್ದು, ಕಛೇರಿ ಸ್ಥಳಾಂತರಿಸಿದ್ದನ್ನೆ ಸಾಧನೆ ಎಂದು ಹೇಳಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.