ಬೆಂಗಳೂರು, ಫೆ.14 (DaijiworldNews/HR): ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದ್ದು, ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ ಇದೆ.
ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಆರಂಭಿಸಿದ್ದು, ಆರ್ಟಿಕಲ್ 25 ಪ್ರಕಾರ ಶಿರವಸ್ತ್ರ ಧರಿಸುವುದು ತಪ್ಪಲ್ಲ ಎಂದು ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸುತ್ತಿದ್ದಾರೆ.
ಇನ್ನು ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆಗೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ತ್ರಿಸದಸ್ಯಪೀಠ ಗುರುವಾರ ಮಧ್ಯಂತರ ಆದೇಶ ನೀಡಿ ಮುಂದಿನ ಆದೇಶದವರೆಗೆ ಶಾಲಾ - ಕಾಲೇಜುಗಳಿಗೆ ಯಾವುದೇ ಧಾರ್ಮಿಕ ಗುರುತು ಧರಿಸಿ ಹೋಗುವಂತಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಆದೇಶ ನೀಡಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.
ಇದೀಗ ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಜೆ.ಎಂ.ಖಾಜಿ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭಗೊಂಡಿದೆ.