ಬೆಂಗಳೂರು, ಫೆ 14 (DaijiworldNews/MS): "ಜಮೀರ್ ಅವರ ಹೇಳಿಕೆ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಎಲ್ಲ ಧರ್ಮದ ಸೋದರಿಯರಿಗೂ ಅಪಾಯಕಾರಿ. ಹೆಣ್ಣನ್ನು "ಬಂಧಿಸಿಡುವ" ವಾದಕ್ಕೆ ಕಾಂಗ್ರೆಸ್ ಪ್ರೋತ್ಸಾಹಿಸುತ್ತಿದೆ" ಎಂದು ಬಿಜೆಪಿಯೂ ಆರೋಪಿಸಿದೆ.
'ಭಾರತದಲ್ಲಿ ಅತ್ಯಾಚಾರ ಹೆಚ್ಚಾಗಲು ಮಹಿಳೆಯರು ಹಿಜಾಬ್ ಧರಿಸದಿರುವುದು ಕಾರಣ ಎಂಬ ಶಾಸಕ ಜಮೀರ್ ಅಹಮದ್ ಅವರ ಹೇಳಿಕೆಯ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, " ಹೆಣ್ಣನ್ನು ಶೋಷಣೆಯ ವಸ್ತುವಿನಂತೆ ನೋಡುವ ವಿಸ್ತೃತ ರೂಪವಿದು, ಕಾಂಗ್ರೆಸ್ಸಿಗರು ನಿಜವಾದ ಸಂವಿಧಾನ ವಿರೋಧಿಗಳು. ಸಂವಿಧಾನಕ್ಕಿಂತ ವೈಯಕ್ತಿಕ ಕಾನೂನು ಪಾಲನೆಗೆ ಬೆಂಬಲಿಸುತ್ತಾರೆ ಎಂದು ಆರೋಪಿಸಿದೆ.
ಹಿಜಾಬ್ ಮೂಲಭೂತ ಹಕ್ಕು ಎಂಬ ಕಾಂಗ್ರೆಸ್ ಪ್ರತಿಪಾದನೆಯ ಮೂಲ ಬಹಿರಂಗವಾಗುತ್ತಿದೆ.ಹೆಣ್ಣನ್ನು ಶೋಷಣೆಯ ವಸ್ತುವಾಗಿ ಪರಿಭಾವಿಸುವ ಮೂಲಭೂತವಾದದ ವಿಸ್ತರಿತ ರೂಪವಿದು.ಸಂವಿಧಾನದಲ್ಲಿ ಉಲ್ಲೇಖಿಸಿರುವ ಸಮಾನತೆಯ ತತ್ವಕ್ಕೆ ಕಾಂಗ್ರೆಸ್ ಏಕೆ ಗೌರವ ನೀಡುತ್ತಿಲ್ಲ, ಇದು ಸಂವಿಧಾನಕ್ಕೆ ಮಾಡುವ ಅಪಮಾನವಲ್ಲವೇ? ಎಂದು ಪ್ರಶ್ನಿಸಿದೆ.
ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಹಾಗೂ ತಿರಂಗ ಧ್ವಜವೇ ರಾಷ್ಟ್ರ ಧರ್ಮ.ಆದರೆ ಕೆಲವರು ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಒಪ್ಪದೇ ವೈಯಕ್ತಿಕ ಕಾನೂನು ಪಾಲನೆ ಮಾಡುತ್ತಿದ್ದಾರೆ. ಡಿಕೆಶಿ ಅವರೇ, ಆ ʼಕೆಲವರʼ ಬಗ್ಗೆ ಮಾತಾನಾಡುವ ತಾಕತ್ತು ನಿಮಗಿದೆಯೇ? ಎಂದು ಟೀಕಿಸಿದೆ.