ಶಿವಮೊಗ್ಗ, ಫೆ 14 (DaijiworldNews/KP): ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು 13 ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಿಂದ ಹೊರ ನಡೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹಿಜಾಬ್ ವಿವಾದ ಮಧ್ಯೆ ಇಂದು ಸರ್ಕಾರದ ಆದೇಶದಂತೆ 9 ಮತ್ತು 10ನೇ ತರಗತಿಗೆ ಶಾಲೆ ಪುನಾರಂಭ ಮಾಡಲಾಗಿದ್ದು, ಗೊಂದಲ, ಆತಂಕ, ಭಯದ ನಡುವೆಯೇ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆ ಬರೆಯುತ್ತಿರುವುದು ಕಂಡು ಬಂದಿದೆ.
ಇನ್ನು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಬಾರದು ಎಂದು ಹೇಳಿತ್ತು. ಆದರೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕೋರ್ಟ್ ಆದೇಶವನ್ನು ಮೀರಿ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಶಿಕ್ಷಕರು ಇದಕ್ಕೆ ಅನುಮತಿ ಕೊಡದ ಹಿನ್ನಲೆ ಪರೀಕ್ಷೆ ಬರೆಯದೆ ಹಿಂದಿರುಗಿರುವ ಘಟನೆ ನಡೆದಿದೆ.
ವಿದ್ಯಾರ್ಥಿನಿಯರು ಸಾಮಾನ್ಯವಾಗಿ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದು ತರಗತಿಗೆ ಹಾಜರಾಗುತ್ತಿದ್ದರು. ಆದರೆ ಶಿವಮೊಗ್ಗದಲ್ಲಿ 13 ಮಂದಿ ವಿದ್ಯಾರ್ಥಿನಿಯರು ಒಂದು ಹೆಜ್ಜೆ ಮುಂದೆ ಹೋಗಿ ಹಿಜಾಬ್ ತೆಗೆಯುವುದಿಲ್ಲ ಬೇಕಾದರೇ ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಡಿ.ಡಿ.ಪಿ,ಐ ರಮೇಶ್ ಅವರು, 13 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಅನುಮತಿ ಕೇಳಿದ್ದರು, ಆದರೆ ಶಿಕ್ಷಕರು ಅನುಮತಿ ನೀಡದೆ ಇರುವುದರಿಂದ ಕೇವಲ ಎಂಟು ಮಕ್ಕಳು ಮಾತ್ರ ಪಟ್ಟು ಹಿಡಿದು ತರಗತಿಯಿಂದ ಹೊರ ಬಂದಿದ್ದು, ಉಳಿದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.