ಚಿಕ್ಕಮಗಳೂರು, ಫೆ 14 (DaijiworldNews/KP): ಕೆಲಸದ ವೇಳೆ ಕುಸಿದು ಬಿದ್ದು ಮಿದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ನರ್ಸ್ ಅವರ ಅಂಗಾಂಗಳನ್ನು ಪೋಷಕರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಚಿಕ್ಕಮಗಳೂರಿನ ಹುಸಕೊಪ್ಪದ ಎನ್.ಆರ್.ಪುರ ತಾಲೂಕಿನ ಕಟ್ಟಿ ನಮನೆ-ಹೊಸಕೊಪ್ಪದ ಕೃಷ್ಣಮೂರ್ತಿ ಮತ್ತು ಲೀಲಾವತಿ ದಂಪತಿ ಪುತ್ರಿ ಗಾನವಿ ಗೌಡ (22) ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತದ್ದರು.
ಫೆ.8ರಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಸ್ಪತ್ರೆಯಲ್ಲೇ ಕುಸಿದು ಬಿದ್ದಿದ್ದರು. ಅವರನ್ನು ಅದೇ ಆಸ್ಪತ್ರೆಯಲ್ಲಿ ಪ್ರಾ ಥಮಿಕ ಚಿಕಿತ್ಸೆ ನೀಡಿ ದಾಖಲಿಸಿ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ತಲೆಗೆ ಪೆಟ್ಟಾಗಿರುವುದರಿಂದ ಫೆ.12 ರಂದು ಮಿದುಳಿನ ಶಸ್ತ್ರ ಚಿಕಿತ್ಸೆ ನಡೆಸಿದರೂ ಯಶಸ್ವಿಯಾಗಿರಲಿಲ್ಲ. ಇದರಿಂದ ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.
ಗಾನವಿ ಅವರಿಂದ ‘ಲಿವರ್, ಕಿಡ್ನಿ, ಕಾರ್ನಿಯಾ ಮತ್ತು ಹಾರ್ಟ್ ವಾಲ್ ದಾನವಾಗಿ ಪಡೆಯಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ನಾಗೇಶ್ ತಿಳಿಸಿದ್ದಾರೆ.
ಈಗಾಗಲೇ ‘ಸಕ್ರಾ ಆಸ್ಪತ್ರೆಯ 48 ವರ್ಷದ ವ್ಯಕ್ತಿಗೆ ಯಕೃತ್, ಮಣಿಪಾಲ್ ಆಸ್ಪತ್ರೆಯ 40 ವರ್ಷದ ಮಹಿಳೆಗೆ ಬಲಭಾಗದ ಮೂತ್ರಪಿಂಡ, ಐಎನ್ಯು ಆಸ್ಪತ್ರೆಯ 35 ವರ್ಷದ ಪುರುಷನಿಗೆ ಎಡಭಾಗದ ಮೂತ್ರಪಿಂಡ ಕಸಿ ಮಾಡಲಾಗಿದೆ. ಮಣಿಪಾಲ್ ಆಸ್ಪತ್ರೆಗೆ ಹೃದಯ ನಾಳಗಳನ್ನು ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗೆ ಕಾರ್ನಿಯಾಗಳನ್ನು ಕಳಿಸಿದ್ದು, ಅರ್ಹ ಮೂರು ಮಂದಿಗೆ ಕಸಿ ಮಾಡಲಾಗುವುದು’ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಗಾನವಿ ಅವರು ಮರಣಪೂರ್ವದಲ್ಲಿ ರೋಗಿಗಳ ಆರೈಕೆ ಮಾಡಿದರು, ಮರಣದ ನಂತರ ಅಂಗಾಂಗ ದಾನ ಮಾಡುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ದುರಂತ ಸಾವಿನ ನಂತರ ‘ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ’- ‘ಬೇರೆಯವರಿಗೋಸ್ಕರ ಬದುಕುವವರು ಮಾತ್ರ ಯಾವಾಗಲೂ ಬದುಕಿರುತ್ತಾರೆ’ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಹೃದಯ ವಿದ್ರಾವಕ ಘಟನೆಯ ನಡುವೆಯೂ ಗಾನವಿ ಕುಟುಂಬದವರು ತೆಗೆದುಕೊಂಡ ನಿರ್ಣಯಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು. ಅಂಗಾಂಗ ದಾನ ಪ್ರತಿಜ್ಞೆ ತೆಗೆದುಕೊಳ್ಳುವುದಕ್ಕೆ ಗಾನವಿ ಸ್ಫೂರ್ತಿಯಾಗಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟೊರೇ ಎಂಟರಾಲಜಿ ಮತ್ತು ಆರ್ಗನ್ ಟ್ರಾನ್ಸ್ಪ್ಲಾಂಟ್ ಮೂಲಕ ಮೊದಲ ಬಾರಿಗೆ ಅಂಗಾಂಗವನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.