ಬೆಂಗಳೂರು, ಫೆ 14 (DaijiworldNews/MS): 'ಭಾರತದಲ್ಲಿ ಅತ್ಯಾಚಾರ ಹೆಚ್ಚಾಗಲು ಮಹಿಳೆಯರು ಹಿಜಾಬ್ ಧರಿಸದಿರುವುದು ಕಾರಣ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್ ಬಿಟ್ಟು ಬೇರೆ ಬಟ್ಟೆ ಹಾಕಿದರೆ ರೇಪ್ ಆಗುತ್ತಾ ? ಇದೆಂತಹ ಕೆಟ್ಟ ಹೇಳಿಕೆ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ವಯಸ್ಸಿಗೆ ಬಂದ ಹುಡುಗಿಯರನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸಲು ಹಿಜಾಬ್, ಬುರ್ಕಾ ಅಗತ್ಯ ಹಿಜಾಬ್ ಹಾಕಿದರೆ ರೇಪ್ ಆಗಲ್ಲ ಎಂಬ ಜಮೀರ್ ಅಹ್ಮದ್ ಹೇಳಿಕೆ ಅತ್ಯಂತ ಕೆಟ್ಟ ಸ್ಟೇಟ್ಮೆಂಟ್ ಆಗಿದೆ. ಹಿಜಾಬ್ ಬಿಟ್ಟು ಬೇರೆ ಬೇರೆ ಬಟ್ಟೆ ಹಾಕಿದರೆ ರೇಪ್ ಆಗುತ್ತಾ ? ಜಮೀರ್ ತಮ್ಮ ಮನಸ್ಸಿಗೆ ಬಂದ ಹಾಗೆ ಮಾತನಾಡಿದ್ದಾರೆ. ಅವ ಯೋಚನೆಗಳು ವಿಶಾಲವಾಗಿರಲಿ ಎಂದು ಹೇಳಿದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ. ಇಂದಿನಿಂದ ಪ್ರೌಢಶಾಲೆಗಳು ಆರಂಭವಾಗಿವೆ. ಬುಧವಾರದವರೆಗೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕಾಲೇಜು ಪುನರಾರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದರು. ಶಾಲೆಗಳ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪೋಷಕರು ಭಯಪಡುವ ಅಗತ್ಯವಿಲ್ಲ. ಆಡಳಿತ ಮಂಡಳಿ ತೆಗೆದುಕೊಂಡ ಕ್ರಮಗಳಿಗೆ ಪೊಲೀಸರು ಬೆಂಬಲವಾಗಿ ಇರುತ್ತಾರೆ ಎಂದು ತಿಳಿಸಿದರು.