ಲಕ್ನೋ, ಫೆ 14 (DaijiworldNews/MS): ದೇಶದಲ್ಲಿ ವ್ಯವಸ್ಥೆಯು ಭಾರತದ ಸಂವಿಧಾನದ ಮೇಲೆ ನಡೆಯಬೇಕೇ ಹೊರತು ಶರಿಯತ್ ಅಥವಾ ಇಸ್ಲಾಮಿಕ್ ಕಾನೂನಿನ ಮೂಲಕವಲ್ಲ ಎಂದು ಕರ್ನಾಟಕ ಹಿಜಾಬ್ ವಿವಾದದ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ.
“ನಮ್ಮ (ಮುಸ್ಲಿಂ) ಹೆಣ್ಣು ಮಕ್ಕಳಿಗೆ ಹಕ್ಕುಗಳನ್ನು ಮತ್ತು ಆಕೆಗೆ ಅರ್ಹವಾದ ಗೌರವವನ್ನು ನೀಡಲು ಪ್ರಧಾನ ಮಂತ್ರಿ ತ್ರಿವಳಿ ತಲಾಖ್ ಕಾನೂನನ್ನು ರದ್ದುಗೊಳಿಸಿದರು. ಈ ವ್ಯವಸ್ಥೆಯೂ ಭಾರತದ ಸಂವಿಧಾನದ ಮೇಲೆ ನಡೆಸಲಾಗುವುದು, ಶರಿಯತ್ ಅಲ್ಲ ಎಂದು ಆದಿತ್ಯನಾಥ್ ಎಐಎಂಐಎಂ ಮುಖ್ಯಸ್ಥ ಓವೈಸಿ ಅವರ ‘ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಪ್ರಧಾನಿಯಾಗುತ್ತಾರೆ" ಎಂಬ ಮಾತಿಗೆ ತಿರುಗೇಟು ನೀಡಿದ್ದಾರೆ.
ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ ಅದನ್ನು ನೋಡಲು ನಾನು ಜೀವಂತವಾಗಿಲ್ಲದಿರಬಹುದು, ಆದರೆ ನನ್ನ ಮಾತುಗಳನ್ನು ನೆನಪಿಡಿ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಮತ್ತು ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದರು.
"ನಾವು ನಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಗಳು ಮತ್ತು ಆಯ್ಕೆಗಳನ್ನು ದೇಶ ಮತ್ತು ಅದರ ಸಂಸ್ಥೆಗಳ ಮೇಲೆ ಹೇರಲು ಸಾಧ್ಯವಿಲ್ಲ. ನಾನು ಉತ್ತರಪ್ರದೇಶದಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಕೇಸರಿ ವಸ್ತ್ರ ಧರಿಸಲು ಹೇಳಬಹುದೇ? ಶಾಲೆಗಳಲ್ಲಿ ಡ್ರೆಸ್ ಕೋಡ್ ಜಾರಿಗೊಳಿಸಬೇಕು.ದೇಶವು ಸಂವಿಧಾನದ ಪ್ರಕಾರ ನಡೆದಾಗ, ಮಹಿಳೆಯರಿಗೆ ಅವರ ಗೌರವ, ಭದ್ರತೆ ಮತ್ತು ಸ್ವಾತಂತ್ರ್ಯ ಸಿಗುತ್ತದೆ" ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ಇಂದು ಮಧ್ಯಾಹ್ನ 2:30 ಕ್ಕೆ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಲು ಸಿದ್ಧವಾಗಿದೆ. ಪ್ರಕರಣದ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು, ಹೈಕೋರ್ಟ್ ಮೊದಲು ಪ್ರಕರಣವನ್ನು ಆಲಿಸಬೇಕು ಎಂದು ಹೇಳಿದೆ.