ಬೆಂಗಳೂರು, ಫೆ 14 (DaijiworldNews/KP): ಹಿಜಾಬ್-ಕೇಸರಿ ಶಾಲು ವಿವಾದದಿಂದ ಬಂದ್ ಆಗಿದ್ದ 9 ಮತ್ತು 10ನೇ ತರಗತಿ ಇಂದಿನಿಂದ ಮತ್ತೆ ಆರಂಭವಾಗಿದೆ.
ಸಾಂದರ್ಭಿಕ ಚಿತ್ರ
ಉಡುಪಿ ಜಿಲ್ಲೆಯಲ್ಲಿ ಶುರುವಾದ ಹಿಜಾಬ್-ಕೇಸರಿ ಶಾಲು ವಿವಾದ ರಾಜ್ಯದ ಅನೇಕ ಜಿಲ್ಲೆಗಳಿಗೆ ಹರಡಿ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ವಾರದಿಂದ 9ನೇ ತರಗತಿಯಿಂದ ಹೈಸ್ಕೂಲ್, ಕಾಲೇಜು, ವೃತ್ತಿಪರ ಕೋರ್ಸ್ಗಳ ಕಾಲೇಜುಗಳಿಗೆ ರಜೆ ಘೋಷಿಸಿತ್ತು.
ಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ಹಿಜಾಬ್-ಕೇಸರಿ ಶಾಲು ಕುರಿತು ಮತ್ತೆ ವಿವಾದ ಭುಗಿಲೇಳಬಹುದು ಎಂಬ ಆತಂಕದಲ್ಲಿಯೇ ಶಿಕ್ಷಣ ಇಲಾಖೆಯು ಪೊಲೀಸ್ ಮತ್ತು ಅಧಿಕಾರಿಗಳ ಬಿಗಿ ಬಂದೋಬಸ್ತ್ ಮೂಲಕ ಫ್ರೌಢ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ.
ಇನ್ನು ಸೂಕ್ಷ್ಮ ಪ್ರದೇಶಗಳಲ್ಲಿರುವ ಶಾಲೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಶಾಲಾ ಆವರಣದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಯೇ ಶಾಲೆ ಆರಂಭಿಸಬೇಕು, ಅಲ್ಲದೆ ಶಾಲೆಗಳ ಸುತ್ತಮುತ್ತ ಮಕ್ಕಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ. ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಅನಗತ್ಯ ಚರ್ಚೆ, ಪ್ರಚೋದನಾಕಾರಿ ಮಾತುಗಳನ್ನು ಹೊರಗೆ ಓಡಾಡುವಾಗ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವಂತಿಲ್ಲ ಎಂದು ಪೊಲೀಸರು ಮತ್ತು ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.
ಇನ್ನು ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ನ ವಿಸ್ತೃತ ಪೀಠದಲ್ಲಿ ಇಂದು 2.30ಕ್ಕೆ ವಿಚಾರಣೆ ನಡೆಯಲಿದ್ದು ತೀರ್ಪು ಯಾವ ರೀತಿ ಹೊರಬರಲಿದೆ ಎಂಬ ಕುತೂಹಲದಲ್ಲಿ ಇಡೀ ರಾಜ್ಯ ಕಾದು ಕುಳಿತಿದೆ