ರಾಮನಗರ, ಫೆ 13 (DaijiworldNews/HR): ನಾನು ರಾಜಕೀಯಕ್ಕೆ ಬಂದಾಗ ಹೆಚ್.ಡಿ.ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನ ಅವರನ್ನು ಗುರುತಿಸಿದರು. ಮುಖ್ಯಮಂತ್ರಿ ಸ್ಥಾನದಲ್ಲಿರುವಾಗ ನಟಿ ರಾಧಿಕಾ ಅವರನ್ನು ಮದುವೆಯಾದರು. ಬಳಿಕ ರಾಧಿಕಾ ಕುಮಾರಸ್ವಾಮಿಯವರಿಂದ ದೂರವಾಗಲು ನೂರಾರು ಕೋಟಿ ಹಣ ಕೊಟ್ಟಿದ್ದು, ಇದು ಯಾವ ಪಾಪದ ಹಣ ಕೊಟ್ಟರು? ಎಲ್ಲಿಂದ ಹಣ ಬಂತು ಎಂಬುದನ್ನು ಎಚ್ಡಿಕೆ ಜನರ ಮುಂದೆ ಸ್ಪಷ್ಟಪಡಿಸಲಿ ಎಂದು ಮಾಜಿ ಶಾಸಕ ಕೆ.ರಾಜು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬಂದಾಗ ಹೆಚ್.ಡಿ.ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ನಾವೇ ಅವರನ್ನು ರಾಮನಗರಕ್ಕೆ ಕರೆತಂದೆವು ಅವರು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಯಶಸ್ವಿಯಾದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಬೆಂಬಲದಿಂದ ಎರಡನೇ ಬಾರಿ ಸಿಎಂ ಆದರು. ಆನಂತರ ಕುಮಾರಸ್ವಾಮಿ ಹಣ ಮಾಡುವ ದಂಧೆಗೆ ಇಳಿದರು. ನೂರಾರು ಕೋಟಿ ಸುರಿದರೂ ಮಂಡ್ಯದಲ್ಲಿ ಕುಮಾರಸ್ವಾಮಿಗೆ ಮಗನನ್ನು ಗೆಲ್ಲಿಸಲು ಆಗಲಿಲ್ಲ. ದೇವೇಗೌಡರು ಸೋಲಲು ಕೂಡ ಕುಮಾರಸ್ವಾಮಿಯೇ ಕಾರಣ ಎಂದು ಆರೋಪಿಸಿದ್ದಾರೆ.