ಕೋಲ್ಕತ್ತ, ಫೆ 13 (DaijiworldNews/KP): ತೃಣಮೂಲ ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಯನ್ನು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ವಿಸರ್ಜಿಸಿದ್ದಾರೆ.
ಕೆಲವು ಹಿರಿಯ ನಾಯಕರ ಜತೆ ಭಿನ್ನಾಭಿಪ್ರಾಯ ಹೊಂದಿರುವ ಕಾರಣ ಅಭಿಷೇಕ್ ಬ್ಯಾನರ್ಜಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ತೊರೆಯಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಕಾಳಿಘಾಟ್ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಪಕ್ಷದ ಕೆಲವು ಹಿರಿಯ ನಾಯಕರ ಜತೆ ಸಭೆ ನಡೆಸಿದ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಸದ್ಯದಲ್ಲಿ ಮಮತಾ ಬ್ಯಾನರ್ಜಿ ಪಕ್ಷದ ಹೊಸ ಪದಾಧಿಕಾರಿಗಳನ್ನು ಶೀಘ್ರ ಘೋಷಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದಾರೆ.
ಇನ್ನು ಇತ್ತೀಚೆಗೆ ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆಯಾಗಿರುವ ಮಮತಾ ಬ್ಯಾನರ್ಜಿ ಅವರು ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕಾಗಿ ಸಣ್ಣ ಸಮಿತಿಯೊಂದನ್ನು ರಚಿಸಿದ್ದು, ನಿನ್ನೆ ನಡೆದ ಸಮಿತಿಯ ಸಭೆಯಲ್ಲಿ ಮಮತಾ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದ್ದಾರೆ ಎಂದು ಟಿಎಂಸಿ ನಾಯಕ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಸದ್ಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಅಮಿತ್ ಮಿತ್ರ, ಪಾರ್ಥ ಚಟರ್ಜಿ, ಸುಬ್ರತಾ ಬಕ್ಷಿ, ಸುದೀಪ್ ಬಂಡೋಪಾಧ್ಯಾಯ, ಅಭಿಷೇಕ್ ಬ್ಯಾನರ್ಜಿ, ಅನುಬ್ರತಾ ಮೊಂಡಲ್, ಅರೂಪ್ ವಿಶ್ವಾಸ್, ಫಿರ್ಹಾದ್ ಹಕೀಮ್, ಯಶ್ವಂತ್ ಸಿನ್ಹಾ, ಅಸೀಮಾ ಪಾತ್ರ, ಚಂದ್ರಿಮಾ ಭಟ್ಟಾಚಾರ್ಜಿ, ಕಕೊಲಿ ಘೋಷ್ ದಸ್ತಿದಾರ್, ಶೋಭಾನ್ದೇವ್ ಚಟ್ಟೋಪಾಧ್ಯಾಯ, ಸುಖೇಂದು ಶೇಖರ್ ರಾಯ್, ಮೊಲೊಯ್ ಘಾಟಕ್, ಜ್ಯೋತಿಪ್ರಿಯಾ ಮಲಿಕ್, ಗೌತಮ್ ದೇವ್, ಬುಲುಚಿಕ್ ಬರೈಕ್ ಹಾಗೂ ರಾಜೇಶ್ ತ್ರಿಪಾಠಿ ಸ್ಥಾನ ಪಡೆದುಕೊಂಡಿದ್ದಾರೆ.
ಮಮತಾ ಅವರು ಪಕ್ಷದ ಹೊಸ ಪದಾಧಿಕಾರಿಗಳ ನೇಮಕ ಮಾಡಲಿರುವ ನಿಟ್ಟಿನಲ್ಲಿ ಕೆಲವರ ಹೆಸರಿರುವ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಿದ್ದಾರೆ ಎಂದು ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಸದ್ಯ ಮಮತಾರವರು ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಅದು ಪ್ರಕಟವಾಗುವ ವರೆಗೆ ಈ ಹಿಂದಿನ ಯಾವುದೇ ಹುದ್ದೆಗಳು ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.