ಬೆಂಗಳೂರು, ಫೆ 13 (DaijiworldNews/HR): ಕೋರ್ಟ್ ಆವರಣದಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಜಗದೀಶ್ ಅವರನ್ನು ಹಲಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೋರ್ಟ್ ಆವರಣದಲ್ಲಿ ವಕೀಲ ಜಗದೀಶ್ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಹೊರಗಡೆಯಿಂದ ಜನರನ್ನು ಕರೆತಂದು ಗೂಂಡಾವರ್ತನೆ ಮಾಡಿದ್ದಾರೆಂದು ಆರೋಪಿಸಿ ಶನಿವಾರ ವಕೀಲರ ಸಂಘದ ವಿವೇಕ್ ರೆಡ್ಡಿ ಅವರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಜಗದೀಶ್ ಅವರನ್ನು ಬಂಧಿಸಲಾಗಿದೆ.
ಇನ್ನು ಭ್ರಷ್ಟಾಚಾರ ಪ್ರಕರಣ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ಗೆ ಹೋದಂತ ಸಮಯದಲ್ಲಿ ನನ್ನ ಹಾಗೂ ನನ್ನ ಮಗನ ಮೇಲೆ ಕೆಲ ಗೂಂಡಾಗಳು ಹಲ್ಲೆ ಮಾಡಿದ್ದಾರೆಂದು ಜಗದೀಶ್ ಅವರು ಫೇಸ್ಬುಕ್ ಲೈವ್ನಲ್ಲಿ ಆರೋಪ ಮಾಡಿದ್ದರು.