ನವದೆಹಲಿ, ಫೆ 12 (DaijiworldNews/HR): 5 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರವು ತಜ್ಞರ ಗುಂಪಿನಿಂದ ಶಿಫಾರಸನ್ನು ಸ್ವೀಕರಿಸಿದ ತಕ್ಷಣ ಹೊರತರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, 5 ರಿಂದ 15 ವರ್ಷದೊಳಗಿನ ಮಕ್ಕಳ ಲಸಿಕೆ ಬಗ್ಗೆ ತಜ್ಞರ ಗುಂಪು ಇದುವರೆಗೆ ಯಾವುದೇ ಶಿಫಾರಸು ಮಾಡಿಲ್ಲ. ವಿಜ್ಞಾನಿಗಳ ಗುಂಪಿನ ಶಿಫಾರಸಿನ ಆಧಾರದ ಮೇಲೆ ಲಸಿಕೆಯನ್ನು ಯಾವಾಗ ಮತ್ತು ಯಾವ ವಯಸ್ಸಿನವರಿಗೆ ನೀಡಬೇಕೆಂದು ನಿರ್ಧರಿಸಲಾಗುತ್ತದೆ. ನಾವು ಅದರ ಶಿಫಾರಸನ್ನು (5 ರಿಂದ 15 ವಯಸ್ಸಿನವರಿಗೆ) ಖಂಡಿತವಾಗಿ ಜಾರಿಗೊಳಿಸುತ್ತೇವೆ ಎಂದರು.
ಇನ್ನು ದೇಶಾದ್ಯಂತ 15-18 ವಯೋಮಾನದ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಕಳೆದ ತಿಂಗಳು ಪ್ರಾರಂಭಿಸಲಾಗಿದ್ದು, ನಮ್ಮಲ್ಲಿ ಸಾಕಷ್ಟು ಲಸಿಕೆಗಳಿವೆ, ಡೋಸ್ಗಳ ಕೊರತೆಯಿಲ್ಲ. ನಾವು ಖಂಡಿತವಾಗಿಯೂ ವೈಜ್ಞಾನಿಕ ಸಮುದಾಯದ ಶಿಫಾರಸುಗಳನ್ನು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.