ಬರೇಲಿ, ಫೆ 12 (DaijiworldNews/KP): ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ರಚನೆಯಾಗಿದ್ದ ಸರ್ಕಾರಗಳೆಲ್ಲ ಜಾತಿವಾದಿ ಸರ್ಕಾರಗಳಾಗಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಬರೀಲಿ ಜಿಲ್ಲೆಯ ಓಲ್ನಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೂ ಬರುವ ಮೊದಲು ಇದ್ದ ಸರ್ಕಾರಗಳು ಜಾತಿವಾದಿ ಸರ್ಕಾರಗಳಾಗಿದ್ದವು, ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆದಿತ್ಯನಾಥ ಅವರು ಎಲ್ಲಾ ಜಾತಿಗಳ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಕೇವಲ ಒಂದು ಜಾತಿಯ ಅಭಿವೃದ್ಧಿಗಾಗಿ ಕೆಲಸ ಮಾಡಿದೆ, ಹಾಗೂ ಬಹುಜನ ಸಮಾಜ ಪಕ್ಷ ಸರ್ಕಾರ ರಚಿಸಿದ್ದಾಗ ಕೆಲವೇ ಜಾತಿಯವರ ಒಳಿತಿಗಾಗಿ ಕೆಲಸ ಮಾಡಿತ್ತು, ಆದರೆ ಮೋದಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ತತ್ವದಡಿ ಅಭಿವೃದ್ದಿಯತ್ತ ಕೆಲಸ ಮಾಡುತ್ತಿದ್ದಾರೆ ಎಂದರು.
2017ರಲ್ಲಿ ಬಿಜೆಪಿಯ ಅಧ್ಯಕ್ಷ ಆಗಿದ್ದ ಸಮಯದಲ್ಲಿ ಯುಪಿಯಲ್ಲಿ ನಡೆಯುತ್ತಿದ್ದ ಗೂಂಡಾಗಿರಿಯನ್ನು ಕೊನೆಗಾಣಿಸುವುದಾಗಿ ಭರವಸೆ ನೀಡಿದ್ದೆ. ಅದರಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆ ಭರವಸೆಗಳನ್ನು ಈಡೇರಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಯಾವುದೇ ಮಾಫಿಯಾಗಳು ಕಾಣಿಸುತ್ತಿಲ್ಲ, ಅಲ್ಲದೆ ಆಜಂ ಖಾನ್, ಅತಿಕ್ ಅಹ್ಮದ್ ಮತ್ತು ಮುಕ್ತಾರ್ ಅನ್ಸಾರಿ ಜೈಲಿನಲ್ಲಿ ಇದ್ದಾರೆ ಎಂದು ಹೇಳಿದರು.