ಮಡಿಕೇರಿ, ಫೆ 11 (DaijiworldNews/HR): ರಾಜ್ಯ, ದೇಶದಾದ್ಯಂತ ಸದ್ದು ಮಾಡುತ್ತಿರುವ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಿಲುಕಿ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ಅಂಥೋಣಿ ಪ್ರಜ್ವಲ್ (18) ಎಂದು ಗುರುತಿಸಲಾಗಿದೆ.
ಅಂಥೋಣಿ ಪ್ರಜ್ವಲ್ ಕೇಸರಿ ಶಾಲು ಧರಿಸಿದ್ದಕ್ಕೆ ಆತನ ಮೇಲೆ ಒಂದು ಕೋಮಿನ ವಿದ್ಯಾರ್ಥಿಗಳ ಗುಂಪು ಹಲ್ಲೆ ಮಾಡಿದ್ದು, ಇದರಿಂದ ನೊಂದು ಈತ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.
ನನ್ನ ಮೇಲೆ ಅನ್ಯಕೋಮಿನ ಏಳು ವಿದ್ಯಾರ್ಥಿಗಳು ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದು, ಒಬ್ಬನನ್ನು ಮಾತ್ರ ವಿಚಾರಣೆ ನಡೆಸಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳು ನನ್ನನ್ನು ದೂರ ಇಟ್ಟಿದ್ದಾರೆ. ಹಾಸ್ಟೆಲ್ ವಾರ್ಡನ್ ಕೂಡ ಅಪರಾಧಿ ಸ್ಥಾನದಲ್ಲಿರಿಸಿ ನೋಡುತ್ತಾರೆ. ತಾಯಿಗೆ ಕರೆ ಮಾಡಿ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ ಎಂದು ಅಂಥೋಣಿ ಪ್ರಜ್ವಲ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಇನ್ನು ಯುವಕನ ಮೇಲೆ ಮಂಗಳವಾರ ಹಲ್ಲೆ ನಡೆದಿದ್ದು, ನಿನ್ನೆ ಸ್ನೇಹಿತರಿಗೆ ಕರೆ ಮಾಡಿದ್ದ ವಿದ್ಯಾರ್ಥಿ ಅವರಿಗೆ ವಿಷಯ ತಿಳಿಸಿ ವಿಷ ಸೇವಿಸಿದ್ದಾನೆ. ತಕ್ಷಣ ಸ್ನೇಹಿತರು ಈತನನ್ನು ಹುಡುಕಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಕುಶಾಲನಗರ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.