ಮೈಸೂರು, ಫೆ 11 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಹಾಳು ಮಾಡುತ್ತಿದ್ದು, ಅವರಿಂದ ನಮ್ಮ ದೇಶವೇ ದಿವಾಳಿಯಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರಕ್ಕೆ 135 ಲಕ್ಷ 87 ಸಾವಿರ ಕೋಟಿ ಸಾಲಯಿದೆ.ಈಗ 11 ಲಕ್ಷದ 59 ಸಾವಿರ ಕೋಟಿ ಸಾಲ ಮಾಡುವುದಾಗಿ ಹೇಳಿದ್ದು, ಕೇಂದ್ರ 9 ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದೆ. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಅಚ್ಚೇ ದಿನ್ ಆಯೇಂಗೆ ಎಂದರೆ ಇದೇನಾ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ರಾಜ್ಯ ಬಜೆಟ್ ನಲ್ಲಿ ಇವರಿಂದ ಯಾವುದೇ ನಿರೀಕ್ಷೆಯಿಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ಇವರು ಬರೆದುಕೊಟ್ಟಿದ್ದನ್ನು ಭಾಷಣ ಮಾಡುತ್ತಾರೆ. ಇವರಿಂದ ಜನಪರ ಬಜೆಟ್ ನಿರೀಕ್ಷೆ ಹೇಗೆ ಸಾಧ್ಯ ಎಂದಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಕೇಳುವ ಧಮ್ ರಾಜ್ಯದ ಯಾರಿಗೂ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಷೇರು ಅನುದಾನ ಕಡಿಮೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.