ದೆಹಲಿ, ಫೆ 11 (DaijiworldNews/KP): ವಿವಾದಿತ ಹಿಜಾಬ್-ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿರುವ ಮೌಖಿಕ ಆದೇಶವನ್ನು ಪ್ರಶ್ನಿಸಿ ಇದೀಗ ಅರ್ಜಿದಾರ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಹಿಜಾಬ್-ಕೇಸರಿ ವಿವಾದದ ತೀರ್ಪು ಬರುವವರೆಗೂ ಶಾಲೆ ಕಾಲೇಜುಗಳಿಗೆ ಧಾರ್ಮಿಕ ಉಡುಪು ಧರಿಸುವಂತಿಲ್ಲ, ಅಲ್ಲದೆ ಹಿಜಾಬ್ ಸಂಘರ್ಷ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಪ್ರೌಡ ಶಾಲೆಗಳನ್ನು ಪುನಾರಂಭ ಮಾಡಬೇಕೆಂದು ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿತ್ತು.
ಹೈಕೋರ್ಟ್ ನೀಡಿದ ಮಧ್ಯಂತರ ಆದೇಶವು ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಆತ್ಮಸಾಕ್ಷಿಯ ಆಯ್ಕೆಯನ್ನು ಪ್ರಶ್ನಿಸಿದೆ, ಅಲ್ಲದೆ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಅರ್ಜಿದಾರ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಮೊದಲು ಕರ್ನಾಟಕ ಹೈಕೋರ್ಟ್ ನಿರ್ಧರಿಸಲಿ, ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುತ್ತೆವೆ ಎಂದು ಸ್ಪಷ್ಟಪಡಿಸಿದೆ.
ಸಿ.ಜೆ.ಐ. ಎನ್.ವಿ.ರಮಣ ನೇತೃತ್ವದ ನ್ಯಾಯ ಪೀಠದ ಮುಂದೆ ಗುರುವಾರ ನ್ಯಾಯವಾದಿ ಕಪಿಲ್ ಸಿಬಲ್ ಕರ್ನಾಟಕದ ಪ್ರಕರಣವನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದರು. ಈ ಅರ್ಜಿಗೆ ಉತ್ತರಿಸಿದ ನ್ಯಾಯಪೀಠ ಮೊದಲು ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ಪೂರ್ತಿಗೊಳ್ಳಲಿ. ನಾವಿಲ್ಲಿ ಅದನ್ನು ಪರಿಗಣಿಸಿದರೆ ಹೈಕೋರ್ಟ್ ವಿಚಾರಣೆ ನಡೆಸದೆ ಇರಬಹುದು. ಇಷ್ಟು ಬೇಗ ಮಧ್ಯಪ್ರವೇಶ ಬೇಡ. ಆದರೆ ಈ ವಿಚಾರವನ್ನು ದೊಡ್ಡದು ಮಾಡಬಾರದು ಹಾಗೂ ರಾಜಕೀಯ ಲಾಭಗಳಿಗಾಗಿ ಬಳಸಿಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.