ಹಾವೇರಿ, ಫೆ 11 (DaijiworldNews/HR): ಫೆಬ್ರವರಿ 14 ರಿಂದ ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ತಿಳಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಶ್ರೀನಿವಾಸ ಆಲದರ್ತಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮಕ್ಕಳ ಪಾಲಕರು ಕಡ್ಡಾಯವಾಗಿ ಎರಡು ಡೋಸ್ ಕೊರೊನಾ ವ್ಯಾಕ್ಸಿನ್ ಪಡೆದಿರಬೇಕು. ಅಂಗನವಾಡಿಗೆ ಬರಲು ಇಚ್ಛಿಸುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು. ಅಂಗವಾಡಿ ಕೇಂದ್ರ ಹಾಗೂ ಅಲ್ಲಿನ ಪಿಠೋಪಕರಣ ಹಾಗೂ ಆಟಿಗೆ ಸಾಮಗ್ರಿಗಳನ್ನು ಶುಚಿಗೊಳಿಸಬೇಕು. ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಬೇಕು. ಅಂಗನವಾಡಿಗೆ ಬರುವ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಜ್ವರ, ಕೆಮ್ಮು, ಗಂಟಲು ನೋವು ಲಕ್ಷಣ ಇದ್ದರೆ ಕೇಂದ್ರಕ್ಕೆ ಬರದಂತೆ ಸೂಚನೆ ನೀಡಬೇಕು ಹಾಗೂ ಆರೋಗ್ಯ ಕೇಂದ್ರಗಳಿಗೆ ತೆರಳುವಂತೆ ಸೂಚನೆ ನೀಡಬೇಕು ಎಂದು ಸೂಚಿಸಲಾಗಿದೆ.
ಇನ್ನು ಮಕ್ಕಳಿಗೆ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡಲು ಕ್ರಮವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಸೋಂಕುನಿವಾರಕ ದ್ರಾವಣಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು ಎಂದು ತಿಳಿಸಿದ್ದಾರೆ.