ತಿರುವನಂತಪುರಂ, ಫೆ. 10 (DaijiworldNews/SM): ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಪರ ವಿರುದ್ಧ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಕೇರಳದ ವಿರುದ್ಧ ಹೇಳಿಕೆ ನೀಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೌಂಟರ್ ನೀಡಿದ್ದಾರೆ.
“ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಬಂಗಾಳವಾಗಿ ಬದಲಾಗುತ್ತದೆ” ಎಂಬುವುದಾಗಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು. ಇದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಕೆರಳಿಸಿದೆ. ಯುಪಿ ಸಿಎಂಗೆ ಕೇರಳ ಮುಖ್ಯಮಂತ್ರಿ ಟ್ವಿಟರ್ನಲ್ಲಿ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ಮೊದಲ ಹಂತದ ಮತದಾನಕ್ಕೂ ಮುನ್ನ ವಿಡಿಯೋ ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತದಾರರಿಗೆ ತಮ್ಮ ಮತವು ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಎಚ್ಚರಿಸಿದ್ದರು. ಅಲ್ಲದೆ, ಒಂದೊಮ್ಮೆ ಮತದಾರರು ಮತದಾನದ ಸಂದರ್ಭದಲ್ಲಿ ತಪ್ಪು ಮಾಡಿದ್ದಲ್ಲಿ ರಾಜ್ಯವು ಕಾಶ್ಮೀರ, ಬಂಗಾಳ ಅಥವಾ ಕೇರಳ ಆಗಬಹುದು ಎಂದು ಹೇಳಿದ್ದರು.
ಯುಪಿ ಸಿಎಂ ಆದಿತ್ಯನಾಥ್ ಅವರ ಹೇಳಿಕೆಯಿಂದ ಕೆರಳಿದ ಕೇರಳ ಸಿಎಂ ಪಿಣರಾಯಿ ವಿಜಯನ್, “ಯೋಗಿ ಆದಿತ್ಯನಾಥ್ ಭಯಪಡುವಂತೆಯೇ ಉತ್ತರಪ್ರದೇಶವು ಕೇರಳವಾಗಿ ಬದಲಾದರೆ, ಅಲ್ಲಿನ ಜನರಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ, ಜೀವನಮಟ್ಟ ದೊರೆಯಲಿದೆ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡದ ಸಾಮರಸ್ಯದ ಸಮಾಜವನ್ನು ಹೊಂದುತ್ತಾರೆ. ಉತ್ತರ ಪ್ರದೇಶದ ಜನರು ಇದನ್ನೇ ಬಯಸುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.