ಸಹರಾನ್ ಪುರ, ಫೆ 10 (DaijiworldNews/MS): ಮುಸ್ಲಿಂ ಮಹಿಳೆಯರ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ತಡೆಯಲು ಜನರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಆರಂಭವಾಗಿ ಇಂದು ದೇಶ-ವಿದೇಶಗಳಲ್ಲಿ ಸದ್ದು ಮಾಡಿರುವ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸರ್ಕಾರ ಮುಸ್ಲಿಂ ಜನಾಂಗದ ಮಹಿಳೆಯರ ಉದ್ಧಾರಕ್ಕೆ ನಿಂತಿದೆ. ಬಿಜೆಪಿ ಸರ್ಕಾರ ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್ನಿಂದ ಮುಕ್ತಗೊಳಿಸಿತು. ಮುಸ್ಲಿಂ ಮಹಿಳೆಯರು ಮೋದಿ ಸರ್ಕಾರವನ್ನು ಬಹಿರಂಗವಾಗಿ ಬೆಂಬಲಿಸಲು ಪ್ರಾರಂಭಿಸಿದಾಗ, ವಿರೋಧಿಗಳು ಆತಂಕಕ್ಕೊಳಗಾದರು. ಆದರೆ ನಾವು ಹಿಂಜರಿಯುವುದಿಲ್ಲ ಪ್ರತಿ ಮುಸ್ಲಿಂ ಮಹಿಳೆಯೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಗುರುವಾರ ಉತ್ತರ ಪ್ರದೇಶದಲ್ಲಿ ತಮ್ಮ ಮೊದಲ ಭೌತಿಕ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ನಮ್ಮ ಸರ್ಕಾರ ಮುಸ್ಲಿಂ ಜನಾಂಗದ ಮಹಿಳೆಯರ ಉದ್ಧಾರಕ್ಕೆ ನಿಂತಿದೆ. ನಮ್ಮ ಸರ್ಕಾರ ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಿಂತಿದೆ. ಆದರೆ ಅವರು ಮುಸ್ಲಿಂ ಸಹೋದರಿಯರನ್ನು ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಧರಿಸಿದ ಕಾರಣಕ್ಕಾಗಿ ಆರು ಮಂದಿ ವಿದ್ಯಾರ್ಥಿನಿಯರಿಗೆ ತಮ್ಮ ಕಾಲೇಜಿಗೆ ಪ್ರವೇಶಿಸಲು ಅವಕಾಶ ನೀಡದ ನಂತರ ಕಳೆದ ತಿಂಗಳು ಜನವರಿ ಅಂತ್ಯಕ್ಕೆ ಭುಗಿಲೆದ್ದ ಕರ್ನಾಟಕದ ಪ್ರಮುಖ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಈ ಗಲಾಟೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಕದನವಾಗಿ ಮಾರ್ಪಟ್ಟಿದ್ದು ಇಂದು ಹೈಕೋರ್ಟ್ ತೀರ್ಪು ಏನು ಬರುತ್ತದೆ ಎಂದು ಕುತೂಹಲವಾಗಿದೆ.