ನವದೆಹಲಿ,ಫೆ 10 (DaijiworldNews/HR): ಮಹಾರಾಷ್ಟ್ರದಲ್ಲಿ ರೈತರೊನೊಬ್ಬರ ಜನ್ ಧನ್ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆಯಾಗಿದ್ದು, ಸಂತೋಷಗೊಂಡ ರೈತ ಪ್ರಧಾನಿಗೆ ಧನ್ಯವಾದ ಹೇಳಿ ಮನೆ ನಿರ್ಮಾಣಕ್ಕೆ ಆ ಹಣ ಉಪಯೋಗಿಸಿ ಇದೀಗ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ನಾಗರಿಕರಿಗೆ 15 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರಿಂದ ಕೇಂದ್ರ ಸರ್ಕಾರ ತನ್ನ ಖಾತೆಗೆ ಹಣ ಜಮಾ ಮಾಡಿದೆ ಎಂದು ಔರಂಗಾಬಾದ್ನ ಪೈಥಾನ್ ತಾಲೂಕಿನವರಾದ ಜ್ಞಾನೇಶ್ವರ್ ಓಟೆ ಭಾವಿಸಿ ಆ ಹಣವನ್ನು ತಮ್ಮ ಮನೆ ನಿರ್ಮಾಣಕ್ಕೆ ಉಪಯೋಗಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ರೈತ ಸುಮಾರು ಆರು ತಿಂಗಳಿನಿಂದ ಈ ಹಣವನ್ನು ತಮ್ಮ ಖಾತೆಯಲ್ಲಿಯೇ ಇಟ್ಟುಕೊಂಡಿದ್ದು, ಈಗ ತಮ್ಮ ಮನೆ ನಿರ್ಮಾಣಕ್ಕಾಗಿ 9 ಲಕ್ಷ ರೂ. ಖರ್ಚ ಮಾಡಿದ ಬಳಿಕ ಬ್ಯಾಂಕ್ನಿಂದ ತಪ್ಪಾಗಿ ಹಣ ಜಮೆಯಾಗಿರುವುರಿಂದ ಪೂರ್ಣ ಮೊತ್ತವನ್ನು ಹಿಂದಿರುಗಿಸಬೇಕೆಂದು ನೋಟಿಸ್ ಬಂದಿದ್ದು ರೈತ ಕಂಗಾಲಾಗಿದ್ದಾರೆ.
ಅಭಿವೃದ್ಧಿ ಉದ್ದೇಶಗಳಿಗಾಗಿ ಪಿಂಪಲ್ವಾಡಿ ಗ್ರಾಮ ಪಂಚಾಯಿತಿಗೆ ಹಣವನ್ನು ಮಂಜೂರು ಮಾಡಬೇಕಾಗಿತ್ತು. ಆದರೆ ಬ್ಯಾಂಕ್ ಆಫ್ ಬರೋಡಾ ತಪ್ಪಾಗಿ ಜ್ಞಾನೇಶ್ವರ್ ಅವರ ಖಾತೆಗೆ ಹಣವನ್ನು ಜಮಾ ಮಾಡಿದೆ.
ಹಣವನ್ನು ಪ್ರಧಾನಿ ಮೋದಿ ಕಳುಹಿಸಿದ್ದಾರೆ ಎಂದು ನಾನು ಭಾವಿಸಿ ಆರು ತಿಂಗಳ ಬಳಕ ಹಣವನ್ನು ಉಪಯೋಗಿಸಿದೆ. ಈಗಾಗಲೇ ನಾನು ಬ್ಯಾಂಕ್ಗೆ 6 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿದ್ದೇನೆ. ಅದರಲ್ಲಿ 9 ಲಕ್ಷ ರೂಪಾಯಿಗಳನ್ನು ನನ್ನ ಮನೆ ನಿರ್ಮಾಣಕ್ಕೆ ಬಳಸಿದ್ದು ಅದನ್ನು ಹಿಂದಿರುಗಿಸಬೇಕಾಗಿದೆ ಎಂದು ಮಹಾರಾಷ್ಟ್ರದ ರೈತ ಹೇಳಿದ್ದಾರೆ.