ಚೆನ್ನರಾಯಪಟ್ಟಣ , ಫೆ 10 (DaijiworldNews/MS): ಬಿಜೆಪಿ-ಕಾಂಗ್ರೆಸ್ ನಾಯಕರ ಮಕ್ಕಳ್ಯಾರೂ ವಿವಾದ ನಡೆಯುತ್ತಿರುವ ಶಾಲೆಗಳಲ್ಲಿ ಓದುತ್ತಿಲ್ಲ. ಹೀಗಾಗಿ ಅವರೆಲ್ಲ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ತಮಾಷೆ ನೋಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, " 15 ದಿನದಿಂದ ಕೇಸರಿ ಶಾಲು ಹಾಕಿಕೊಂಡು ಹೋರಾಟ ಮಾಡುತ್ತಿರುವವರಲ್ಲಿ ಯಾರೂ ಕೂಡಾ ಬಿಜೆಪಿ ನಾಯಕರ ಮಕ್ಕಳಿಲ್ಲ, ಅಮಾಯಕ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿಕೊಂಡು ಗಲಾಟೆ ಎಬ್ಬಿಸುವುದು ಸರಿಯಲ್ಲ. ಇಲ್ಲಿ ಪಕ್ಷ-ಸಂಘಟನೆಗಳು ತಮ್ಮ ತೆವಲಿಗೆ ವಿದ್ಯಾರ್ಥಿಗಳನ್ನು ಉಪಯೋಗಪಡಿಸಿಕೊಳ್ಳುತ್ತಿವೆ. ಸರ್ಕಾರಿ ಶಾಲೆಗೆ ಕಳುಹಿಸಿದ ತಮ್ಮ ಮಕ್ಕಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುವುದನ್ನು ಪೋಷಕರು ಕೂಡಾ ಅರ್ಥ ಮಾಡಿಕೊಳ್ಳಬೇಕಿದೆ" ಎಂದು ಹೇಳಿದ್ದಾರೆ.
"ಸರ್ಕಾರಿ ಶಾಲೆಗಳಲ್ಲೇ ವಿವಾದ ಭುಗಿಲೆದ್ದಿದೆ. ಪ್ರತಿಷ್ಟಿತ ಖಾಸಗಿ ಶಾಲೆಗಳಲ್ಲಿಈ ಸಂಘರ್ಷ ನಡೆದಿಲ್ಲ ಯಾಕೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಸರ್ಕಾರಿ ಕಾಲೇಜಿನಲ್ಲಿ 10-12 ಮಕ್ಕಳ ಮೇಲೆ ಎಫ್ಐಆರ್ ಸಹ ದಾಖಲಾಗಿರುವುದು ಅತಂಕಕಾರಿ ವಿಚಾರವಾಗಿದೆ. ದಾಖಲಾಗಿರುವ ವಿಡಿಯೋಗಳನ್ನು ಇಟ್ಟುಕೊಂಡು ಮುಂದೆ ನೂರಾರು ಮಕ್ಕಳನ್ನು ಕೋರ್ಟು-ಕಚೇರಿ ಎಂದು ಅಲೆಸಲಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ
ಹೈಕೋರ್ಟ್ ನ್ಯಾಯಪೀಠವು ಆದಷ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿ, ಈ ವಿವಾದಕ್ಕೆ ನ್ಯಾಯಯುತ ತೀರ್ಮಾನ ನೀಡಲಿ ಎಂದು ಹೇಳಿದ್ದಾರೆ.