ಬೆಂಗಳೂರು, ಫೆ 10 (DaijiworldNews/HR): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಾರ್ಯಕ್ರಮವೊಂದರ ಉದ್ಘಾಟನೆ ವೇಳೆ ಸಚಿವರನ್ನು ಓವರ್ ಟೇಕ್ ಮಾಡಿ ಶಾಸಕರು ಟೇಪ್ ಕತ್ತರಿಸಿ, ಒಳಪ್ರವೇಶಿಸೋದಕ್ಕೆ ತೆರಳಿದ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರ ನಡುವೆ ಗಲಾಟೆ ನಡೆದಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ ತಿಳಿದು ಬಂದಿದೆ.
ಸಚಿವ ಎಂ.ಟಿ.ಬಿ ನಾಗರಾಜ್ ಹಾಗೂ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ನಡುವೆ ವಾಗ್ವಾದ ತಾರಕ್ಕೇರಿ, ಕೈಕೈ ಮಿಲಾಯಿಸೋ ಹಂತದವರೆಗೆ ತಲುಪಿರೋ ಘಟನೆ ಇಂದು ನಡೆದಿದೆ.
ಟೇಪ್ ಕತ್ತರಿಸೋದಕ್ಕೆ ಸಚಿವ ಎಂ.ಟಿ.ಬಿ.ನಾಗರಾಜ್ ನನ್ನೇ ತಳ್ಳಿ, ಶಾಸಕ ಶರತ್ ಬಚ್ಚೇಗೌಡ ಹೋಗಿದ್ದರಿಂದ ಸಚಿವರು ಸಿಟ್ಟಾಗಿ ತಂದೆ-ಮಗನ ದಬ್ಬಾಳಿಕೆ ಹೆಚ್ಚಾಯಿತೆಂದು ಗರಂ ಆಗಿದ್ದಾರೆ. ಅಲ್ಲದೇ ಸಚಿವರಿಗೆ ಗೌರವ ಕೊಡುವಂತೆಯೂ ವಾರ್ನ್ ಮಾಡಿದ್ದು, ಇದರಿಂದ ಕೋಪಗೊಂಡ ಶಾಸಕ ಶರತ್ ಬಚ್ಚೇಗೌಡ, ಕೈ ಬೆರಳು ತೋರಿಸಿ ಮಾತನಾಡದಂತೆ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಈ ವೇಳೆ ಪರಸ್ಪರ ಮಾತಿನ ಚಕಮಕಿ ತಾರಕ್ಕೇರಿ, ಕೈಕೈ ಮಿಲಾಯಿಸೋ ಹಂತಕ್ಕೂ ವಾಗ್ವಾದ ಹೋಗಿದೆ ಎನ್ನಲಾಗಿದೆ.