ಬೆಂಗಳೂರು, ಫೆ 10 (DaijiworldNews/HR): ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಮನ್ನಷ್ಟು ವಿವಾದ ಎಬ್ಬಿಸುವುದು ಬೇಡ, ಕೋರ್ಟ್ ಆದೇಶ ಬರುವವರೆಗೆ ಕಾಯೋಣ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಮತ್ತು ಕೇಸರಿ ವಿಚಾರದಲ್ಲಿ ಯಾರೂ ಕೂಡ ಈ ವಿಚಾರದಲ್ಲಿ ಪ್ರಚೋದರೆ ನೀಡದೆ ಶಾಂತಿ, ಸೌಹಾರ್ದತೆಯಿಂದ ವರ್ತಿಸೋಣ, ಶಾಲಾ ಮಕ್ಕಳ ವಿಚಾರದಲ್ಲಿ ನಾವು ಶಾಂತರಾಗಿರಬೇಕು ಯಾರೂ ವಿವಾದಿತ ಹೇಳಿಕೆ ನೀಡಬೇಡಿ ಎಂದರು.
ಇಂದು ಸಂಜೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರೊಂದಿಗೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ವಿಚಾರವಾಗಿ ಸಭೆ ನಡೆಸಿ ಚರ್ಚೆ ನಡೆಸಲಾಗುವುದು. 9ನೇ ತರಗತಿಯಿಂದ ಶಾಲೆ ಪುನಾರಂಭಿಸುವ ಬಗ್ಗೆ ಇಂದು ಸಂಜೆಯೇ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಹಿಜಾಬ್ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರನ್ನು ಒಳಗೊಂಡು ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠವನ್ನು ಬುಧವಾರ ಕರ್ನಾಟಕ ಹೈಕೋರ್ಟ್ ರಚಿಸಿದ್ದು, ಮಧ್ಯಾಹ್ನ 2.30ಕ್ಕೆ ತ್ರಿಸದಸ್ಯ ಪೀಠವು ಮನವಿಗಳ ವಿಚಾರಣೆ ನಡೆಸಲಿದೆ.