ಬೆಂಗಳೂರು, ಫೆ 10 (DaijiworldNews/MS): ಹಿಜಾಬ್ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರನ್ನು ಒಳಗೊಂಡು ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠವನ್ನು ಬುಧವಾರ ಕರ್ನಾಟಕ ಹೈಕೋರ್ಟ್ ರಚಿಸಿದ್ದು, ಮಧ್ಯಾಹ್ನ 2.30ಕ್ಕೆ ತ್ರಿಸದಸ್ಯ ಪೀಠವು ಮನವಿಗಳ ವಿಚಾರಣೆ ನಡೆಸಲಿದೆ.
ನ್ಯಾಯಪೀಠದಲ್ಲಿ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದು,ಫೆ.10ರಂದು ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಲಿದೆ.
ಹಿಜಾಬ್ ಧಾರಣೆಗೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ಏಳು ಪ್ರತ್ಯೇಕ ಅರ್ಜಿಗಳ ಕುರಿತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಬುಧವಾರ ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಂಡಿತು.
ಪಕ್ಷಕಾರರು ಎತ್ತಿರುವ ವಿಚಾರಗಳು ಬಹುಮುಖ್ಯವಾದ ಸಾಂವಿಧಾನಿಕ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿವೆ. ವೈಯಕ್ತಿಕ ಕಾನೂನಿನ ಕೆಲವು ವಿಚಾರಗಳ ಹಿನ್ನೆಲೆಯಲ್ಲಿ ಮೂರು ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ನ ಅರ್ಧ ಡಜನ್ಗೂ ಹೆಚ್ಚು ತೀರ್ಪುಗಳನ್ನೂ ಉಲ್ಲೇಖಿಸಲಾಗಿದೆ. ನಿನ್ನೆ ಪಕ್ಷಕಾರರು ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ಕಟತೆಯಿಂದ ವಾದಿಸಿದ್ದು, ಇದರಿಂದ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳಿಗೆ ಅನುಕೂಲವಾಗಿದೆ” ಎಂದು ನ್ಯಾ. ದೀಕ್ಷಿತ್ ಅವರು ಆದೇಶದಲ್ಲಿ ಹೇಳಿದ್ದರು.
ಪ್ರಶ್ನೆಗಳ ಪ್ರಾಮುಖ್ಯತೆಯ ಚರ್ಚೆಯ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇರಿಸಲಾಗುವುದು ಅವರು ಈ ಪ್ರಕರಣವನ್ನು ನಿರ್ಧರಿಸಲು ವಿಸ್ತೃತ ಪೀಠದ ರಚನೆಯ ಅಗತ್ಯತೆಯನ್ನು ತೀರ್ಮಾನಿಸಲಿದ್ದಾರೆ” ಎಂದು ನ್ಯಾ. ದೀಕ್ಷಿತ್ ಹೇಳಿದ್ದರು.
ವಕೀಲರಾದ ಮೊಹಮ್ಮದ್ ತಾಹೀರ್, ಶತಭಿಷ್ ಶಿವಣ್ಣ, ಮೊಹಮ್ಮದ್ ನಿಯಾಜ್ ಎಸ್, ನವೀದ್ ಅಹ್ಮದ್ ಮತ್ತು ಸಿರಾಜುದ್ದೀನ್ ಅಹ್ಮದ್ ಅವರ ಮೂಲಕ ಸಲ್ಲಿಸಲಾಗಿರುವ ಪ್ರತ್ಯೇಕ ಮನವಿಗಳನ್ನು ಒಟ್ಟುಗೂಡಿಸಿ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ.