ಲಕ್ನೋ, ಫೆ 10 (DaijiworldNews/MS): 2024 ರ ಸಾರ್ವತ್ರಿಕ ಚುನಾವಣೆಯ ಮೊದಲ ಸೆಮಿಫೈನಲ್ ಎಂದು ಹೇಳಲಾದ ಉತ್ತರ ಪ್ರದೇಶಕ್ಕಾಗಿ ಪಕ್ಷಗಳ ಹೋರಾಟ ಇಂದು ಪ್ರಾರಂಭವಾಗಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಗುರುವಾರ(ಫೆ.10) ಆರಂಭವಾಗಿದ್ದು ಪಶ್ಚಿಮ ಉತ್ತರ ಪ್ರದೇಶ ಭಾಗದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 11 ತಿಂಗಳ ರೈತರ ಪ್ರತಿಭಟನೆಯ ಕೇಂದ್ರವಾಗಿರುವ ರಾಜ್ಯದ ನಿರ್ಣಾಯಕ ಪಶ್ಚಿಮ ಘಟ್ಟದ 58 ಕ್ಷೇತ್ರಗಳಲ್ಲಿ ಚತುಷ್ಕೋನ ಸ್ಪರ್ಧೆಯ ನಡುವೆಯೇ ಇಂದು ಚುನಾವಣೆ ನಡೆಯಲಿದೆ.
ಈ ನಡುವೆ ರಾಜ್ಯದಲ್ಲಿ ಮೊದಲ ಸುತ್ತಿನ ಚುನಾವಣೆಗೆ ಗಂಟೆಗಳ ಮೊದಲು ಬಿಜೆಪಿಗೆ ಮತ ಚಲಾಯಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ. "ಮತದಾರರು 'ತಪ್ಪು ಮಾಡಿದರೆ' ಉತ್ತರ ಪ್ರದೇಶ ರಾಜ್ಯವು , ಕಾಶ್ಮೀರ, ಕೇರಳ ಅಥವಾ ಬಂಗಾಳವಾಗಬಹುದು" ಎಂದು ಎಚ್ಚರಿಸಿದ್ದಾರೆ
ಉತ್ತರ ಪ್ರದೇಶ ಬಿಜೆಪಿಯು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಯೋಗಿ ಆದಿತ್ಯನಾಥ್ ಅವರು ಬಿಜೆಪಿಗೆ ಮತ ಹಾಕಿದರೆ "ಭಯಮುಕ್ತ ಜೀವನ ಗ್ಯಾರಂಟಿ" ಎಂದು ಹೇಳಿದ್ದಾರೆ.
"ನನ್ನ ಮನದಾಳದಲ್ಲಿರುವ ಒಂದು ಸಂಗತಿಯನ್ನು ನಿನಗೆ ಹೇಳಬೇಕು. ಈ ಐದು ವರ್ಷಗಳಲ್ಲಿ ಬಹಳಷ್ಟು ಅದ್ಭುತಗಳು ನಡೆದಿವೆ. ಎಚ್ಚರ! ನಾವು ತಪ್ಪು ಹೆಜ್ಜೆ ಇಟ್ಟರೆ ಈ ಐದು ವರ್ಷಗಳ ದುಡಿಮೆ ಹಾಳಾಗುತ್ತದೆ. ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನನ್ನ ಐದು ವರ್ಷಗಳ ಪ್ರಯತ್ನಕ್ಕೆ ನಿಮ್ಮ ಮತವು ಆಶೀರ್ವಾದವಾಗಿದೆ, ನಿಮ್ಮ ಮತವು ನಿಮ್ಮ ಭಯಮುಕ್ತ ಜೀವನಕ್ಕೆ ಭರವಸೆ ನೀಡುತ್ತದೆ" ಎಂದು ಯೋಗಿ ಆದಿತ್ಯನಾಥ್ ವಿಡಿಯೋದಲ್ಲಿ ಹೇಳಿದ್ದಾರೆ.
"ದೊಡ್ಡ ನಿರ್ಧಾರದ ಸಮಯ ಬಂದಿದೆ, ಕಳೆದ ಐದು ವರ್ಷಗಳಲ್ಲಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಸಮರ್ಪಣಾ ಮತ್ತು ಬದ್ಧತೆಯಿಂದ ಎಲ್ಲವನ್ನೂ ಮಾಡಿದೆ. ನೀವು ಎಲ್ಲವನ್ನೂ ನೋಡಿದ್ದೀರಿ ಮತ್ತು ಎಲ್ಲವನ್ನೂ ವಿವರವಾಗಿ ಕೇಳಿದ್ದೀರಿ" ಎಂದು ಹೇಳುವ ಮೂಲಕ ಬಿಜೆಪಿಗೆ ಮತ ಚಲಾಯಿಸಲು ಮನವಿ ಮಾಡಿಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿದ್ದಾರೆ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಬಿಜೆಪಿ ಪಕ್ಷಕ್ಕೆ ಪ್ರಮುಖ ಸವಾಲಾಗಿದೆ.