ಬೆಂಗಳೂರು, ಫೆ 10 (DaijiworldNews/MS): ತಿರಂಗ ಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಯಿಂದ ರಾಷ್ಟ್ರವ್ಯಾಪಿ ತಪ್ಪು ಸಂದೇಶ ರವಾನೆಯಾಗಿದೆ. ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ಕಾಂಗ್ರೆಸ್ ಪಕ್ಷದ್ ಟೂಲ್ಕಿಟ್ ಭಾಗದ ಅನುಗುಣವಾಗಿ ದೇಶದೊಳಗೆ ಮತ್ತು ಪ್ರಪಂಚದಲ್ಲಿ ಭಾರತದ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ ಕುತ್ಸಿತ ಮನೋಭಾವವನ್ನು ಇದು ಅನಾವರಣಗೊಳಿಸಿದೆ. ಇದು ಕೋಮು ಸೌಹಾರ್ದತೆ ಕದಡುವ ವ್ಯವಸ್ಥಿತ ಹುನ್ನಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಡಿಕೆಶಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾತನಾಡುವಾಗ ಹತ್ತು ಬಾರಿ ಯೋಚಿಸಬೇಕಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿ ಸಮುದಾಯ ಎದ್ದು ನಿಂತ ಸಂದರ್ಭದಲ್ಲಿ ನಾವಾಡುವ ಪ್ರತಿ ಮಾತಿಗೂ ಸೂಕ್ಷ್ಮತೆ ಇರಬೇಕಾಗುತ್ತದೆ. ಆದರೆ ಕೆಪಿಸಿಸಿ ಅಧ್ಯಕ್ಷರು ಈ ಲಕ್ಷ್ಮಣರೇಖೆಯನ್ನು ದಾಟಿದ್ದು ವಿಷಾದನೀಯ.
ಮೊನ್ನೆ ತಿರಂಗ ಧ್ವಜವನ್ನು ಇಳಿಸಲು ಬಿಜೆಪಿ ಪ್ರೇರಣೆ ನೀಡಿದೆ ಎಂದವರು, ಇಂದು ಕೇಸರಿ ಶಾಲಿಗೆ ಬಿಜೆಪಿ ಪ್ರಾಯೋಜಕತ್ವ ವಹಿಸಿದೆ ಎಂಬ ಇನ್ನೊಂದು ಅಸತ್ಯ ನುಡಿದಿದ್ದಾರೆ. ಸುಳ್ಳು ಹೇಳುವುದನ್ನು ಕೆಪಿಸಿಸಿ ಅಧ್ಯಕ್ಷರು ಕರಗತ ಮಾಡಿಕೊಂಡಿದ್ದಾರೆ
ಖಾಲಿ ಇದ್ದ ಧ್ವಜಸ್ತಂಭದಲ್ಲಿ ಓಂಕಾರ ಧ್ವಜವನ್ನು ಹಾರಿಸಲಾಗಿದೆ. ತ್ರಿವರ್ಣ ಧ್ವಜವನ್ನು ಇಳಿಸಿ ಈ ಧ್ವಜ ಹಾರಿಸಿಲ್ಲ. ತ್ರಿವರ್ಣ ಧ್ವಜದ ಗೌರವ ಹೆಚ್ಚಳಕ್ಕಾಗಿ ಬಿಜೆಪಿ ಹಗಲಿರುಳೆನ್ನದೆ ಕೆಲಸ ಮಾಡುತ್ತಿದೆ. 20 ವರ್ಷಗಳ ಹಿಂದೆಯೇ ಈ ಸವಾಲನ್ನು ನಾವು ಸ್ವೀಕರಿಸಿ ಲಾಲ್ ಚೌಕ್ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದೇವೆ. ಕರ್ನಾಟಕದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಬಲಿದಾನ ಮಾಡಿದ ಪಕ್ಷ ನಮ್ಮದು ಎಂದು ಅವರು ಹೇಳಿದ್ದಾರೆ.
ಕಳೆದ 70 ವರ್ಷಗಳಿಂದ ಕಾಂಗ್ರೆಸ್ ದೇಶದಲ್ಲಿ ಒಡೆದು ಆಳುವ ನೀತಿ, ಮತೀಯ ಭಾವನೆಯನ್ನು ಕೆರಳಿಸುವ ಹಾಗೂ ಜನರಲ್ಲಿ ಅಭದ್ರತೆ ಮೂಡಿಸುವ ಕಾರ್ಯ ಮಾಡುತ್ತಿದೆ. ರಾಜಕೀಯ ಕಾರಣ ಮತ್ತು ಸ್ವಾರ್ಥಕ್ಕಾಗಿ ದೇಶದ ಗೌರವವನ್ನು ಜಗತ್ತಿನ ಮುಂದೆ ಕಡಿಮೆಗೊಳಿಸುವ ಹುನ್ನಾರ ಇದರ ಹಿಂದಿದೆ ಹಾಗೂ ಇದನ್ನು ಬಿಟ್ಟು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಂದ ಬೇರೆ ಏನನ್ನು ಅಪೇಕ್ಷಿಸಲು ಸಾಧ್ಯ? ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ದಾರೆ.
ಸಮಾಜ ಒಡೆಯುವ ಕೆಲಸಕ್ಕೆ ಕೆಪಿಸಿಸಿ ಅಧ್ಯಕ್ಷರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿರುವುದು ಸ್ವಸ್ಥ ಸಮಾಜಕ್ಕೆ ಆತಂಕಕಾರಿ ವಿಚಾರ. ತಿರಂಗ ಧ್ವಜವನ್ನು ಇಳಿಸಲಾಗಿದೆ ಎಂಬ ಸುಳ್ಳು ಹೇಳಿಕೆ ರಾಜ್ಯದ ವಿದ್ಯಾರ್ಥಿ ಸಮುದಾಯವನ್ನು ಉದ್ರೇಕಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.