ಬೆಂಗಳೂರು, ಫೆ. 09 (DaijiworldNews/SM): ಹಿಜಾಬ್ ವಿವಾದ ಹೈಕೋರ್ಟ್ ವಿಚಾರಣೆಯ ಬಳಿಕ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿರುವ ವಿಚಾರ ತಿಳಿದಿದೆ. ಅಲ್ಲದೆ, ಈ ಬಗ್ಗೆ ವಿಸ್ತೃತವಾದ ವಿಚಾರಣೆಯಾಗಬೇಕಿದೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಇದೀಗ ಹಿಜಾಬ್ ವಿವಾದ ವಿಚಾರಣೆಗೆ ಹೈಕೋರ್ಟ್ ಪೂರ್ಣ ಪೀಠ ರಚನೆಯಾಗಿದೆ. ಮೂವರು ನ್ಯಾಯಮೂರ್ತಿಗಳ ಪೀಠವನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಚಿಸಿದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಪೀಠದಲ್ಲಿ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರು ಒಳಗೊಂಡಿದ್ದಾರೆ. ಫೆ.10ರಂದು ಮಧ್ಯಾಹ್ನ 2.30ಕ್ಕೆ ಅರ್ಜಿ ಹೈಕೋರ್ಟ್ ನ್ಯಾಯಪೀಠದಿಂದ ವಿಚಾರಣೆ ನಡೆಯಲಿದೆ.
ಹಿಜಾಬ್ ಧಾರಣೆಗೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಈಗಾಗಲೇ ಏಳು ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳನ್ನು ಹೈಕೋರ್ಟ್ ನ ಏಕ ಸದಸ್ಯ ಪೀಠ ವೀಚಾರಣೆಗೆ ಕೈಗೆತ್ತಿಕೊಂಡಿದೆ. ಈ ನಡುವೆ ಇಂದು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿದ್ದು, ಅದರಂತೆ ವಿಸ್ತೃತ ವಿಚಾರಣೆಗೆ ಅನುವು ಸಿಕ್ಕಿದೆ.