ಬೆಂಗಳೂರು, ಫೆ 09 (DaijiworldNews/MS): ಹಿಜಾಬ್ ಧರಿಸುವಂತೆ ಕೋರಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಎರಡನೇ ದಿನ ಕೂಡ ನಡೆಯಿತು. ಅರ್ಜಿಗೆ ಸಂಬಂಧಪಟ್ಟಂತೆ ಪರ ಹಾಗೂ ವಿರೋಧದ ವಾದ ವಿವಾದವನ್ನು ಆಲಿಸಿ ಅರ್ಜಿ ವಿಚಾರಣೆಯನ್ನು ನ್ಯಾಯಾಪೀಠವೂ ಯಾವುದೇ ತೆರನಾದ ಮಧ್ಯಂತರ ಆದೇಶ ಹೊರಡಿಸದೆ ಹಿಜಾಬ್ ಪ್ರಕರಣವನ್ನು ವಿಸ್ತೃತ ಪೀಠದ ಮುಂದಿಡಲು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಆದೇಶಿದ್ದಾರೆ.
ಮಧ್ಯಂತರ ಆದೇಶವನ್ನು ವಿಭಾಗೀಯ ಪೀಠವೇ ನೀಡಲಿ , ಹಿಜಾಬ್ ವಿವಾದ ವಿಸ್ಕ್ರತ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ವಿಸ್ಕ್ರತ ಪೀಠ ರಚನೆನ್ನು ನ್ಯಾಯಮೂರ್ತಿಯೇ ನಿರ್ಧರಿಸಲಿ ಎಂದು ಹೇಳಿ ಸಂಪೂರ್ಣ ಕಡತವನ್ನು ಮುಖ್ಯ ನ್ಯಾಯಮೂರ್ತಿಗೆ ಹಸ್ತಾಂತರಿಸಿ ದಾಖಲೆಗಳನ್ನು ಸಲ್ಲಿಸುವಂತೆ ರಿಜಿಸ್ಟ್ರಾರ್ ಗೆ ಸೂಚನೆ ನೀಡಿದೆ.
ಇದು ತುರ್ತಾಗಿ ಬಗೆ ಹರಿಸಬೇಕಾದ ಪ್ರಕರಣ. ಪ್ರಕರಣದಲ್ಲಿ ಅನೇಕ ಮುಖ್ಯ ಪ್ರಶ್ನೆಗಳು ಮೂಡಿದ್ದು, ಮಧ್ಯಂತರ ಆದೇಶವನ್ನೂ ನ್ಯಾಯಮೂರ್ತಿಗಳೇ ನೀಡಲಿ ಎಂದು ಏಕ ಸದಸ್ಯ ಪೀಠ ಹೇಳಿದೆ.
ಇನ್ನು ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಸಲ್ಲಿಸಿರುವ ಮೂರು ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನಿನ್ನೆ ನಡೆಸಿ ಇಂದಿಗೆ ವಿಚಾರಣೆ ಮುಂದೂಡಲಾಗಿತ್ತು
ನಿನ್ನೆ ಕಲಾಪದ ದಿನದಂತ್ಯಕ್ಕೆ ತಲುಪಿದಾಗ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು "ಪ್ರಕರಣದ ವಿಚಾರಣೆ ಮಧ್ಯಂತರದಲ್ಲಿರುವಾಗ ಧರಣಿ ಮತ್ತು ಕಾನೂನು, ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ ಎಂಬ ವಿಷಯವನ್ನು ನನ್ನ ಗಮನಕ್ಕೆ ತರಲಾಗಿದೆ. ಹೀಗಾಗಿ, ಯಾವುದೇ ತೆರನಾದ ಧರಣಿ, ಪ್ರತಿಭಟನೆಗೆ ಯಾರೂ ಇಳಿಯದಂತೆ ನಿರ್ಬಂಧ ವಿಧಿಸಿ ಮಧ್ಯಂತರ ನಿರ್ದೇಶನ ನೀಡಬೇಕು" ಎಂದು ಪೀಠಕ್ಕೆ ಕೋರಿದರು. ಇದಕ್ಕೆ ಪೀಠವು "ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ವಿನಂತಿ ಮಾಡುತ್ತೇವೆ. ಜನರ ಬುದ್ಧಿವಂತಿಕೆ ಮತ್ತು ಸದ್ಗುಣದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಜನರು ಅದನ್ನು ಆಚರಣೆಗೆ ತರುತ್ತಾರೆ ಎಂದು ಭಾವಿಸಿದ್ದೇವೆ" ಎಂದು ಆದೇಶಿಸಿತ್ತು.