ಪಾಲಕ್ಕಾಡ್ ಫೆ 09 (DaijiworldNews/MS): ಕೇರಳದ ಪಾಲಕ್ಕಾಡ್ನ ಪರ್ವತದಲ್ಲಿ ಸೋಮವಾರದಿಂದ ಪರ್ವತದ ಕಂದಕದಲ್ಲಿ ನಡುವೆ ಸಿಕ್ಕಿಬಿದ್ದಿದ್ದ ಯುವಕ ಆರ್ ಬಾಬು (32) ಸೇನೆಯ ನಿರಂತರ ಪ್ರಯತ್ನದ ಫಲವಾಗಿ ಬುಧವಾರ ಬೆಳಗ್ಗೆ ರಕ್ಷಿಸಲಾಗಿದೆ.
ಬಾಬು ತನ್ನ ಮೂವರು ಸ್ನೇಹಿತರೊಂದಿಗೆ ಸೋಮವಾರ ಮಲಂಪುಳದ ಚೇರಾದ್ ಬೆಟ್ಟಕ್ಕೆ ಚಾರಣ ಆರಂಭಿಸಿದ್ದರು. ಆದರೆ ಉಳಿದ ಇಬ್ಬರು ಬೆಟ್ಟ ಏರುವ ಪ್ರಯತ್ನವನ್ನು ಅರ್ಧಕ್ಕೆ ಕೈಬಿಟ್ಟಿದ್ದರು. ಬಾಬು ಮೇಲಕ್ಕೆ ಏರವುದನ್ನು ಮುಂದುವರೆಸಿ ಅಲ್ಲಿಗೆ ತಲುಪಿದ ನಂತರ, ಕಾಲು ಜಾರಿ ಬಿದ್ದು, ಪರ್ವತದ ಮುಖದ ಮೇಲೆ ಬಂಡೆಗಳ ಸೀಳಿನ ನಡುವೆ ಸಿಲುಕಿಕೊಂಡಿದ್ದರು. ಬಿದ್ದ ಸಮಯದಲ್ಲಿ ಗಾಯಗೊಂಡ ಅವರು ನಂತರ ಚೆರಾಡ್ ಬೆಟ್ಟದಲ್ಲಿ ಸಿಕ್ಕಿಬಿದ್ದ ಸ್ಥಳದ ಸೆಲ್ಫಿ ಮತ್ತು ಛಾಯಾಚಿತ್ರಗಳನ್ನು ಕಳುಹಿಸಿದ್ದ ಎಂದು ಚಾರಣಿಗ ಸ್ನೇಹಿತರು ತಿಳಿಸಿದ್ದರು.
ಬಾಬು ರಕ್ಷಣೆಗೆ ಯತ್ನಿಸಿದ ರಾಜ್ಯ ಸರ್ಕಾರ ಕೊನೆಗೆ ಭಾರತೀಯ ಸೇನಾ ನೆರವನ್ನು ಯಾಚಿಸಿತ್ತು. ಬುಧವಾರ ಬೆಳಗ್ಗೆ ಕಾರ್ಯಾಚರಣೆ ಮಾಡಿ ಯುವಕನನ್ನು ರಕ್ಷಿಸುವಲ್ಲಿ ಸೇನಾಪಡೆ ಯಶಸ್ವಿಯಾಗಿದೆ. ರಕ್ಷಣಾ ಕಾರ್ಯದ ನಂತರ, ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದ ಯುವಕ ಆರ್. ಬಾಬು ಹೆಲ್ಮೆಟ್ ಧರಿಸಿದ್ದ ಸೇನಾ ಸಿಬ್ಬಂದಿಯೊಂದಿಗೆ ಕಾಣಿಸಿಕೊಂಡರು. ರಕ್ಷಣಾ ಕಾರ್ಯದಲ್ಲಿ ಪರ್ವತಾರೋಹಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡವೂ ಭಾಗಿಯಾಗಿತ್ತು
ಪಾಲಕ್ಕಾಡ್ ಜಿಲ್ಲಾ ವೈದ್ಯಕೀಯ ಅಧಿಕಾರಿ ನೇತೃತ್ವದ ಗುಂಪು ಎಲ್ಲಾ ವೈದ್ಯಕೀಯ ಅಗತ್ಯತೆಗಳನ್ನು ಸಿದ್ಧಪಡಿಸಿಕೊಂಡಿತ್ತು. ಆಂಬ್ಯುಲೆನ್ಸ್ ಮತ್ತು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯವಿರುವ ಯಾವುದೇ ವಿಶೇಷ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿತ್ತು.