ಬೆಂಗಳೂರು, ಫೆ 09 (DaijiworldNews/MS): ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ಗೃಹಸಚಿವರು,ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು? ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, " ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಇದರ ಹಿಂದೆ ಎಸ್ ಡಿಪಿಐ- ಸಿಎಫ್ ಐ ಇರಬಹುದೆಂಬ ಶಂಕೆ ಮೂಡಿದೆಯಂತೆ. ಇಲ್ಲಿಯ ವರೆಗೆ ಇವರ ಗೃಹಸಚಿವರು,ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು? ಗೃಹಸಚಿವ ಅರಗ ಜ್ಞಾನೇಂದ್ರ, ಸಚಿವ ಈಶ್ವರಪ್ಪಸೇರಿದಂತೆ ಬಿಜೆಪಿ ನಾಯಕರು ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಕಾಂಗ್ರೆಸ್ ಇದೆ ಎನ್ನುತ್ತಿದ್ದಾರೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಸಿಎಫ್ ಐ ಮೇಲೆ ಶಂಕೆಯಂತೆ. ಮೊದಲು ಎಲ್ಲರೂ ಕೂಡಿ ಒಂದು ತೀರ್ಮಾನಕ್ಕೆ ಬರುವುದು ಒಳ್ಳೆಯದು "ಎಂದು ಟೀಕಿಸಿದ್ದಾರೆ.
ಎಸ್ ಡಿಪಿಐಯೋ, ಸಿಎಫ್ಐಯೋ ವಿದ್ಯಾರ್ಥಿಗಳ ನಡುವೆ ಕೋಮುಸಂಘರ್ಷ ಹುಟ್ಟುಹಾಕುತ್ತಿರುವವರು ಯಾರೇ ಇರಲಿ, ಅಂತಹವರನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ. ಇನ್ನೂ ಶಂಕೆ-ಅನುಮಾನ ಎಂದು ಕಾಲಹರಣ ಯಾಕೆ ಮಾಡುತ್ತೀರಿ? ಆರೋಪಿಗಳ ಜೊತೆ ಏನಾದರೂ ಒಳಒಪ್ಪಂದ ನಡೆದಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್ ಧಾರಣೆಯ ಸರಿ-ತಪ್ಪು ಬಗ್ಗೆ ನ್ಯಾಯಾಲಯ ನಿರ್ಧರಿಸಲಿ,ಅಲ್ಲಿಯ ವರೆಗೆ ಕಾಯೋಣ.ಆದರೆ ವಿದ್ಯಾರ್ಥಿನಿಗಳ ಮೇಲೆ ಹಲ್ಲೆಗೆ ಪ್ರಯತ್ನ,ಶಾಲೆಗೆ ಕಲ್ಲೆಸೆತ,ರಾಷ್ಟ್ರಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಅಪರಾಧ ಹೌದಾದರೆ ಮೊದಲು ಈ ಪುಂಡು ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ ಅವರು ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಯಾರಿದ್ದಾರೆಂದು ರಾಜ್ಯ ಬಿಜೆಪಿಸರ್ಕಾರ ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ. ವಿವಾದದ ಮುಂದೆ ಯಾರಿದ್ದಾರೆ ಎನ್ನುವುದನ್ನು ರಾಜ್ಯ,ದೇಶ,ವಿದೇಶದ ಜನತೆ ಲೈವ್ ವಿಡಿಯೋಗಳಲ್ಲಿ ನೋಡುತ್ತಿದ್ದಾರೆ. ಅವರ ವಿರುದ್ದ ಕ್ರಮ ಯಾವಾಗ? ಎಂದು ಕೇಳಿದ್ದಾರೆ.