ಬೆಂಗಳೂರು, ಫೆ 09 (DaijiworldNews/KP): ಕಾಂಗ್ರೆಸ್ ನಾಯಕರು ಹಿಜಾಜ್-ಕೇಸರಿ ವಿಷಯದಲ್ಲಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ, ಇದರಿಂದ ವಿದ್ಯಾರ್ಥಿಗಳ ಮನಸಿನಲ್ಲಿ ಮತೀಯ ಭಾವನೆ ಸೃಷ್ಟಿಯಾಗಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳ್ಳು ಮಾಹಿತಿ ನೀಡಿದ್ದಾರೆ. ಕಾಲೇಜು ಅವರಣದಲ್ಲಿ ಯಾವುದೇ ರಾಷ್ಟ್ರ ಧ್ವಜ ಹಾರುತ್ತಿರಲಿಲ್ಲ, ಹಾಗಾಗಿ ವಿದ್ಯಾರ್ಥಿಗಳು ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂದರು.
ಇಂಥಹ ಬೇಜವಾಬ್ದಾರಿ ಹಾಗೂ ಸುಳ್ಳು ಹೇಳಿಕೆಯನ್ನು ಒಬ್ಬ ಹಿರಿಯ ಕಾಂಗ್ರೆಸ್ ನಾಯಕರ ಬಾಯಿಯಲ್ಲಿ ಬರುವುದರ ಹಿಂದಿನ ಉದ್ದೇಶ ಏನಿರಬಹುದು ಎಂದು ಸಾರ್ವಜನಿಕರು ಊಹಿಸುತ್ತಿದ್ದಾರೆ. ಇವರ ಇಂತಹ ಮಾತಿನಿಂದಾಗಿ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಮತೀಯ ಭಾವನೆಯನ್ನು ತುಂಬಬಾರದು ಎಂದು ಹೇಳಿದರು.
ಇನ್ನು ನಿನ್ನೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ, ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯ ಹಿಂದಿನ ಪ್ರೇರಣಾ ಶಕ್ತಿಗಳು ಯಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಆಗಲಿದೆ ಎಂದು ಸಚಿವರು ತಿಳಿಸಿದರು.