ಜೈಪುರ, ಫೆ 09 (DaijiworldNews/KP): ಮೋದಿ ಸರ್ಕಾರ ರಚನೆಯಾದ ತಕ್ಷಣದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಂದರ್ಭದಲ್ಲಿ ಮತ್ತು ಏಕೆ ತುರ್ತು ಪರಿಸ್ಥಿತಿ ನಿರ್ಮಾಣವಾಯಿತು? ಬಳಿಕ ಸರ್ಕಾರವು ಪತನಗೊಂಡಿತು, ಇವೆಲ್ಲವೂ ಎಲ್ಲರಿಗೂ ತಿಳಿದಿದೆ, ಈ ವಿಚಾರದ ಬಗ್ಗೆ ಈಗ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಹೇಳಿದರು.
ಸಂಸತ್ತನ್ನು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಈ ಹಿಂದೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಅವರು, ಮೋದಿ ಸರ್ಕಾರ ರಚನೆಯಾದ ತಕ್ಷಣದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಬಂದಿದ್ದು, ಅಲ್ಲದೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಿಂಸಾಚಾರ ಹಾಗೂ ಅಪನಂಬಿಕೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇನ್ನು ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಏನೂ ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಗೆಹ್ಲೋಟ್ ಆರೋಪಿಸಿದರು.
ಬಿಜೆಪಿ ಸರ್ಕಾರ ತಪ್ಪು ಮಾಡಿದೆ, ಇಲ್ಲವಾದರೆ ಇದ್ದಕ್ಕಿದ್ದಂತೆ ಲಾಕ್ಡೌನ್ ಮತ್ತು ದೇಶದಲ್ಲಿ ನೋಟು ಬ್ಯಾನ್ ಮಾಡಬೇಕಿತ್ತು?, ಈ ನೋಟ್ ಬ್ಯಾನ್ನಿಂದಾಗಿ ವಲಸೆ ಕಾರ್ಮಿಕರು ದಾರಿಯಲ್ಲಿ ಊಟವಿಲ್ಲದೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ? ಎಂಬುದರ ಬಗ್ಗೆ ಸರ್ಕಾರದ ಬಳಿ ಅಂಕಿ ಅಂಶ ಇದೆಯೇ ? ಎಂದು ಪ್ರಶ್ನಿಸಿದರು.