ಪಾಲಕ್ಕಾಡ್, ಫೆ 09 (DaijiworldNews/MS): ಕೇರಳದ ಪಾಲಕ್ಕಾಡ್ನ ಮಲಂಪುಳ ಪ್ರದೇಶದಲ್ಲಿ ಚಾರಣಿಗ ಯುವಕನೋರ್ವ ಕಾಲು ಜಾರಿ ಬಿದ್ದು ಬಂಡೆಗಳ ನಡುವಿನ ಬೆಟ್ಟದ ಕಂದಕದಲ್ಲಿ ಸಿಕ್ಕಿಬಿದ್ದು, ಕಳೆದ ಎರಡು ದಿನಗಳಿಂದ ನೀರು ಆಹಾರವಿಲ್ಲದೆ ಕಾಲಕಳೆದಿದ್ದು , ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಭಾರತೀಯ ಸೇನೆ ಆತನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಕೇರಳ ರಾಜ್ಯ ಸರ್ಕಾರವೂ ನೀರು ಮತ್ತು ಆಹಾರವಿಲ್ಲದೆ ಬಿಸಿಲಿನ ತಾಪದಲ್ಲಿ ಬಂಡೆಗಳ ನಡುವೆ ಬೆಟ್ಟದ ಭಾಗದಲ್ಲಿ ಸಿಲುಕಿರುವ ಯುವಕನನ್ನು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸೇರಿದಂತೆ ಹಲವಾರು ಪ್ರಯತ್ನಗಳನ್ನು ಈಗಾಗಲೇ ನಡೆಸಿದ್ದೂ ಅದರೂ ಆತನ ರಕ್ಷಣೆ ಸಾಧ್ಯವಾಗಿರಲಿಲ್ಲ. ಈ ಹಿನ್ನಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯುವಕರನ್ನು ರಕ್ಷಿಸಲು ಭಾರತೀಯ ಸೇನೆಯ ಸೇನೆಯ ನೆರವು ಕೋರಿದ್ದರು. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಗೆ ಕೈ ಜೋಡಿಸಿದೆ
ಬಂಡೆಯ ಬೆಟ್ಟದಲ್ಲಿ ಸಿಲುಕಿರುವ ಯುವಕನನ್ನು ಆರ್ ಬಾಬು (23 ವರ್ಷ) ಎಂದು ಗುರುತಿಸಲಾಗಿದೆ. ಬಾಬು ತನ್ನ ಮೂವರು ಸ್ನೇಹಿತರೊಂದಿಗೆ ಸೋಮವಾರ ಮಲಂಪುಳದ ಚೇರಾದ್ ಬೆಟ್ಟಕ್ಕೆ ಚಾರಣ ಆರಂಭಿಸಿದ್ದಾರೆ. ಆದರೆ ಉಳಿದ ಇಬ್ಬರು ಪ್ರಯತ್ನವನ್ನು ಅರ್ಧಕ್ಕೆ ಕೈಬಿಟ್ತಿದ್ದಾರೆ.
ಆದಾಗ್ಯೂ, ಬಾಬು ಮೇಲಕ್ಕೆ ಏರಲು ಮುಂದುವರೆಸಿ ಅಲ್ಲಿಗೆ ತಲುಪಿದ ನಂತರ, ಕಾಲು ಜಾರಿ ಬಿದ್ದು, ಪರ್ವತದ ಮುಖದ ಮೇಲೆ ಬಂಡೆಗಳ ಸೀಳಿನ ನಡುವೆ ಸಿಲುಕಿಕೊಂಡಿದ್ದರು. ಬಿದ್ದ ಸಮಯದಲ್ಲಿ ಗಾಯಗೊಂಡ ಅವರು ನಂತರ ಚೆರಾಡ್ ಬೆಟ್ಟದಲ್ಲಿ ಸಿಕ್ಕಿಬಿದ್ದ ಸ್ಥಳದ ಸೆಲ್ಫಿ ಮತ್ತು ಛಾಯಾಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಚಾರಣಿಗ ಸ್ನೇಹಿತರು ತಿಳಿಸಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಸೇನೆ ಮತ್ತು ನೌಕಾಪಡೆಯ ತಂಡಗಳ ಜೊತೆಗೆ ಭಾರತೀಯ ವಾಯುಪಡೆಯ ಪ್ಯಾರಾ ಕಮಾಂಡೋ ಕಾರ್ಯಚಾರಣೆ ನಡೆಸಿದ್ದು, ಮಲಂಪುಳದ ಚೇರಾದ್ ಬೆಟ್ಟದಲ್ಲಿ ಸಿಲುಕಿದ್ದ ಯುವಕರನ್ನು ಸೇನಾ ತಂಡ ಹಗ್ಗದಿಂದ ಮೇಲೆತ್ತಲು ಆರಂಭಿಸಿದೆ. ವರದಿಗಳ ಪ್ರಕಾರ, ತಂಡವು ಬೆಳಿಗ್ಗೆ ಬಾಬು ಅವರಿಗೆ ಆಹಾರ ಮತ್ತು ನೀರನ್ನು ನೀಡಿದೆ.
ರಕ್ಷಣಾ ಕಾರ್ಯಾಚರಣೆ ಕೊನೆಯ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ರಕ್ಷಣೆಯ ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. 30 ಸದಸ್ಯರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಮಿಷನ್ಗಾಗಿ ಅವರನ್ನು ಎರಡು ತಂಡಗಳಾಗಿ ನಿಯೋಜಿಸಲಾಗಿದೆ. ಬಾಬು ಗೆಳೆಯರೂ ತಂಡದ ಜೊತೆಗಿದ್ದಾರೆ.