ನವದೆಹಲಿ, ಫೆ 09 (DaijiworldNews/MS): ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷ ರಾಜ್ಯದೆಲ್ಲೆಡೆ ವ್ಯಾಪಿಸಿದ್ದು , ಇದು ಒಂದೆಡೆ ಕಾನೂನು ಸುವ್ಯವಸ್ಥೆ ಸವಾಲೊಡ್ಡಿದ ಕಾರಣ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಇನ್ನೊಂದೆಡೆ ಹಿಜಾಬ್ ಪ್ರಕರಣದ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ವಿವಾದ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ನಡುವೆ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಯಿಕೂಡ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಶಿಕ್ಷಣ ಮತ್ತು ಹಿಜಾಬ್ ನಡುವೆ ಯಾವುದು ಬೇಕು ಎಂಬ ಬಗ್ಗೆ ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜುಗಳು ನಮ್ಮನ್ನು ಒತ್ತಾಯಿಸುತ್ತಿವೆ. ಹೆಣ್ಣುಮಕ್ಕಳು ಹಿಜಾಬ್ನಲ್ಲಿ ಶಾಲೆಗೆ ಬರಬಾರದು ಎಂದು ನಿರಾಕರಿಸುತ್ತಿರುವ ಬೆಳವಣಿಗೆಯು ತೀರಾ ಭಯಾನಕವಾಗಿದೆ. ಮಹಿಳೆಯರು ಧರಿಸುವ ಬಟ್ಟೆಯು ಹೆಚ್ಚಾಗಿರಬೇಕು ಅಥವಾ ಕಡಿಮೆ ಆಗಿರುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಗಳು ಮುಂದುವರಿಯುತ್ತಿವೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು," ಎಂದು ಮಲಾಲ ಟ್ವೀಟ್ ಮಾಡಿದ್ದಾರೆ.