ಬೆಂಗಳೂರು, ಫೆ 08 (DaijiworldNews/KP): ಹೈಕೋರ್ಟ್ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ಪ್ರಾರಂಭಿಸುತ್ತಿದ್ದಂತೆ, ಕರ್ನಾಟಕ ರಾಜ್ಯದ ಹಲವು ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರತಿಭಟನೆ ತಾರಕಕ್ಕೇರಿ ಕಲ್ಲು ತೂರಾಟ ಮತ್ತು ಲಾಠಿ ಚಾರ್ಜ್ ನಡೆದ ಘಟನೆಗಳು ವರದಿಯಾಗಿದೆ.
ಶಿವಮೊಗ್ಗದ ಬಾಪೂಜಿನಗರ ಸಕಾರಿ ಪದವಿ ಪೂರ್ವ ಕಾಲೇಜಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳು ಮತ್ತು ಕೇಸರಿ ಶಾಲು ಹಾಕಿ ಬಂದ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದ ನಂತರ ಕಲ್ಲು ತೂರಾಟ ಆರಂಭವಾಗಿದ್ದು, ಈ ಗುಂಪುಗಳನ್ನು ಹತ್ತಿಕ್ಕಲು ಲಾಠಿ ಪ್ರಹಾರ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕಲ್ಲು ತೂರಾಟದಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬ ಮಾಹಿತಿ ದೊರಕಿದೆ. ಇನ್ನು ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನ ಪ್ರವೇಶ ದ್ವಾರದಲ್ಲಿ ಕಾಲೇಜು ಆಡಳಿತ ಮಂಡಳಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳನ್ನು ತಡೆದ ಹಿನ್ನಲೆ, ಕಾಲೇಜಿಗೆ ಎದುರು ಜಮಾಯಿಸಿದ ವಿದ್ಯಾರ್ಥಿಗಳು ನಾವೆಲ್ಲರೂ ಒಂದೇ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ಬೆಂಬಲಿಸುವ ನಿಟ್ಟಿನಲ್ಲಿ, ನೀಲಿ ಶಾಲುಗಳುನ್ನು ಕಾಕಿಕೊಂಡು ಬಂದ ಇನ್ನೊಂದು ಗುಂಪು ಸೃಷ್ಟಿಯಾದ ಬೆನ್ನಲ್ಲೇ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಜಾಜ್-ಕೇಸರಿ ವಿವಾದವು ತಾರಕಕ್ಕೆರಿದ್ದು, ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಅಲ್ಲಾ ಹೋ ಅಕ್ಬರ್ ಘೋಷಣೆಗಳನ್ನು ಕೂಗಿದ್ದು, ಈ ವೇಳೆ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ, ಸದ್ಯ ಕಾಲೇಜಿನಲ್ಲಿ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ.
ಇನ್ನು ಹಿಜಾಬ್ ವಿಚಾರವಾಗಿ ಬಾಗಲಕೋಟೆಯ ರಬಕವಿಬನಹಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಿಣೆ ಮಾಡಿದೆ.
ಸದ್ಯ ಹಿಜಾಬ್-ಕೇಸರಿ ವಿವಾದ ಕಾವು ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿಗೂ ತಟ್ಟಿದೆ