ಬೆಂಗಳೂರು, ಫೆ 08 (DaijiworldNews/MS): ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸುವಾಗ ಹಿಜಾಬ್ ಅಗತ್ಯ ಕಾಣಲಿಲ್ಲ. ಹಾಗಾದರೆ, ಈಗಿನ ಪ್ರತಿಭಟನೆಯ ಹಿಂದಿನ ಉದ್ದೇಶವೇನು? ಈ ಟೂಲ್ ಕಿಟ್ನ ಹಿಂದಿರುವ ರಾಷ್ಟ್ರ ವಿರೋಧಿ ಶಕ್ತಿಗಳು ಯಾವುದು ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ"ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗುವುದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ್ಯವಿದೆ.ಉಡುಪಿ, ಕುಂದಾಪುರದ ವಿದ್ಯಾರ್ಥಿನಿಯರನ್ನು ಈ ವಿವಾದಕ್ಕೆ ಬಳಸಿಕೊಳ್ಳಲಾಗಿದೆ. ಈಗ ರಾಜ್ಯಕ್ಕೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ.ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಮೂಲಭೂತವಾದದ ಪ್ರವೇಶ ಎಷ್ಟು ಸರಿ? ಹಿಜಾಬ್ ವಿವಾದ ಸೃಷ್ಟಿಯಾದ ಕೆಲವೇ ದಿನಗಳಲ್ಲಿ ಇದನ್ನು ಅಂತಾರಾಷ್ಟ್ರೀಯ ಸುದ್ದಿಯಾಗಿ ಪ್ರಕಟಿಸಲಾಯಿತು.ಭಾರತದಲ್ಲಿ ಧಾರ್ಮಿಕ ಅಸಹನೆ ಇದೆ ಎಂಬ ಸುಳ್ಳು ವಿಚಾರವನ್ನು ಪ್ರತಿಷ್ಠಾಪಿಸುವ ಯೋಜಿತ ಸಂಚು ಇದಲ್ಲವೇ?ಈ ಟೂಲ್ ಕಿಟ್ನ ಹಿಂದಿರುವ ರಾಷ್ಟ್ರ ವಿರೋಧಿ ಶಕ್ತಿಗಳ ಹೆಸರು ಬಹಿರಂಗವಾಗಲಿ" ಎಂದು ಒತ್ತಾಯಿಸಿದೆ.
ಹಿಜಾಬ್ ನಮ್ಮ ಮೂಲಭೂತ ಹಕ್ಕು ಎಂದು ವಾದಿಸುತ್ತಿರುವ ಕೆಲವೇ ವಿದ್ಯಾರ್ಥಿಗಳು ಈ ಹಿಂದೆ ಸಮವಸ್ತ್ರದಲ್ಲಿಯೇ ಕಾಲೇಜಿಗೆ ಬರುತ್ತಿದ್ದರು.ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸುವಾಗ ಹಿಜಾಬ್ ಅಗತ್ಯ ಕಾಣಲಿಲ್ಲ.ಹಾಗಾದರೆ, ಈಗಿನ ಪ್ರತಿಭಟನೆಯ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದೆ.
ಉಡುಪಿ, ಕುಂದಾಪುರಕ್ಕೆ ಸೀಮಿತವಾಗಿದ್ದ ಹಿಜಾಬ್ ವಿವಾದ ಈಗ ರಾಜ್ಯದ ಇತರೆ ಜಿಲ್ಲೆಗಳಿಗೆ ವ್ಯಾಪಿಸಿದೆ. ಕೋರ್ಟ್ ಮೆಟ್ಟಿಲೇರಿದೆ.ಈ ವಿವಾದವನ್ನು ತನ್ನ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಹವಣಿಸುತ್ತಿದೆ. ನೆರೆಮನೆಗೆ ಬೆಂಕಿ ಬಿದ್ದಾಗ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ. ಹಿಜಾಬ್ ಪ್ರಕರಣದ ದುರುದ್ದೇಶ, ಜಾತ್ಯತೀತ ಹೆಸರಿನಲ್ಲಿನ ಮುಖವಾಡ ಎರಡೂ ಕಳಚಿ ಬೀಳುವ ಸಮಯವಿದು. ಮುಸ್ಲಿಂ ಮಹಿಳೆಯರ ಹಕ್ಕಿನ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ನಾಯಕರಿಗೆ, ಇದೇ ಮಹಿಳೆಯರು ತ್ರಿವಳಿ ತಲಾಖ್ನಿಂದ ಎದುರಿಸುವ ದೌರ್ಜನ್ಯದ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಕೇಳಿದೆ
ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ ಕೈವಾಡ ಇದೆ ಎಂದು ಡಿ.ಕೆ.ಶಿವಕುಮಾರ್ ರವರು ಹೇಳುತ್ತಾರೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಈ ವಿವಾದಕ್ಕೆ ಪ್ರೇರಣೆ ನೀಡುತ್ತಾರೆ. ಹಿಜಾಬ್ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುತ್ತಾರೆ. ಹಾಗಾದರೆ ಇವರ ಉದ್ದೇಶವೇನು? ಎಂದು ಪ್ರಶ್ನಿಸಿದೆ.