ಜೈಪುರ, ಫೆ 08 (DaijiworldNews/KP): ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಆಕ್ರಮಣಕಾರಿ ರಾಜಕೀಯ ಪ್ರಾರಂಭವಾಗಿದೆ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿರುವ ಹಲವಾರು ವಿಭಿನ್ನ ವಿಚಾರಧಾರೆಗಳು ಮತ್ತು ಚಿಂತನೆಗಳ ಬಗ್ಗೆ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆ ಇದೆ ಮತ್ತು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು.
ಇನ್ನು ಸೈದ್ಧಾಂತಿಕ ಭಿನ್ನಭಿಪ್ರಾಯಗಳಿದ್ದರೂ ನಾವು ಒಳ್ಳೆಯ ಭಾಷೆಗಳನ್ನು ಬಳಕೆ ಮಾಡಬೇಕು, ಅದನ್ನು ಬಿಟ್ಟು ರಾಜಕೀಯ ಹೆಸರಿನಲ್ಲಿ ಹಿಂಸೆ ಮಾಡುವುದು ಸರಿಯಲ್ಲ, ನಾವುಗಳು ಪರಸ್ಪರ ವಾದ ಮಂಡಿಸುವುದು, ವಿರೋಧಿಸುವುದು ಎಲ್ಲವು ಆರೋಗ್ಯಕರ ಸಂಪ್ರದಾಯವಾಗಿದೆ ಎಂದರು
ಆರ್ಇಇಟಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರ ಮತ್ತು ಎಐಸಿಸಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಇನ್ನು ರಾಜಸ್ಥಾನದಲ್ಲಿ ಬಾಕಿ ಉಳಿದಿರುವ ಸಚಿವ ಸ್ಥಾನದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಮಂತ್ರಿ ಅಥವಾ ದೊಡ್ಡ ಹುದ್ದೆಯನ್ನು ನೀಡಲಾಗುವುದಿಲ್ಲ ಆದರೆ ಸರ್ಕಾರದಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದರು.