ನವದೆಹಲಿ, ಫೆ 08 (DaijiworldNews/KP): ಬಹುಸಂಸ್ಕೃತಿ, ವೈವಿಧ್ಯಮಯ ದೇಶವನ್ನು ಬ್ರಿಟಿಷರು ಆಡಳಿತ ಮಾಡುವ ಸಮಯದಲ್ಲಿ "ಒಡೆದು ಆಳುವ" ನೀತಿಯನ್ನು ಅಳವಡಿಸಿಕೊಂಡಿದ್ದರು, ಆದರೆ ಈಗ ಕಾಂಗ್ರೆಸ್ ಮಾತ್ರ ವಿಭಜಿಸಿ ಆಳುವುದನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ, ಜೊತೆಗೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಮಾಜಿ ಪ್ರಧಾನಿ ಜವಹಾರಲಾಲ್ ನೆಹರೂ ಹೆಸರನ್ನು ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ಬ್ರಿಟೀಷರು ದೇಶ ಬಿಟ್ಟು ಹೋದರೂ, ಕಾಂಗ್ರೆಸ್ ಮಾತ್ರ ವಿಭಜಿಸಿ ಆಳುವುದನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷವೀಗ ತುಕ್ಡೆ ತುಕ್ಡೆ ಗ್ಯಾಂಗ್ನ ನಾಯಕನಾಗಿ ಹೊರಹೊಮ್ಮಿದೆ ಎಂದು ಅವರು ಟೀಕಿಸಿದ್ದಾರೆ.
ನೆಹರೂ ಅವರು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಾ, ಕೊರಿಯಾ ಯುದ್ಧದಿಂದಾಗಿ ಹಣದುಬ್ಬರ ಉಂಟಾಗಿದೆ ಎಂದಿದ್ದರು, ದೇಶದ ಮೊದಲ ಪ್ರಧಾನಿಯಾಗಿ ದೇಶವಾಸಿಗಳ ಮುಂದೆ ಹೇಗೆ ಕೈಚೆಲ್ಲಿದ್ದರು ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ ಎಂದಿದ್ದಾರೆ.
ಒಂದು ವೇಳೆ ಈಗಲೂ ಅಧಿಕಾರವನ್ನು ನೀಡಿದರೆ ಕೊರೊನಾವೈರಸ್ ಕಾರಣ ಹೇಳಿ ಹಣದುಬ್ಬರ ಸಮಸ್ಯೆಯನ್ನು ನುಣುಚಿ ಹಾಕುತ್ತಾರೆ ಎಂದು ರಾಹುಲ್ ಗಾಂಧಿಯವರ ಮಾತಿಗೆ ಮೋದಿ ತಿರುಗೇಟು ನೀಡಿದರು.
ಇನ್ನು ಕಾಂಗ್ರೆಸ್ ಹಲವು ಚುನಾವಣೆಗಳನ್ನು ’ಗರೀಬಿ ಹಟಾವೋ’ ಎಂಬ ಸ್ಲೋಗನ್ನಿಂದಲೇ ಗೆದ್ದಿದೆ, ಆದರೆ ಬಡತನ ನಿರ್ಮೂಲನೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.