ಬೆಂಗಳೂರು, ಫೆ 08 (DaijiworldNews/MS): "ಕಾಂಗ್ರೆಸ್ ಪಕ್ಷದ ಸರ್ವನಾಶ ಉಡುಪಿಯಿಂದಲೇ ಪ್ರಾರಂಭವಾಗಿದೆ "ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರವಿದೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಮುಖಂಡರಿಂದ ಈ ವಿವಾದ ಸೃಷ್ಟಿಸುವ ಕೆಲಸವಾಗಿದೆ. ಕಾಂಗ್ರೆಸ್ ಮುಖಂಡರು ಮನಸು ಮಾಡಿದ್ದರೆ ಈ ಸಮಸ್ಯೆ ಬಗೆ ಹರಿಸಬಹುದಿತ್ತು. ಆ ಆರು ಜನ ವಿದ್ಯಾರ್ಥಿನಿಯರಿಗೆ ತಿಳುವಳಿಕೆ ನೀಡಬಹುದಿತ್ತು. ಆದರೆ ಕಾಂಗ್ರೆಸ್ಗೆ ಮುಸ್ಲಿಂ ಮತಗಳೇ ಮುಖ್ಯವಾಗಿದ್ದು ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ
ಕಾಂಗ್ರೆಸ್ ಪಕ್ಷದ ಸರ್ವನಾಶವಾಗುವುದು ಖಚಿತ. ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ. ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲೂ ಸೋತರು. ಈಗ ಉಡುಪಿಯಿಂದಲೇ ಹಿಜಾಬ್ ವಿವಾದ ಆರಂಭವಾಗಿದೆ, ಕಾಂಗ್ರೆಸ್ ಸರ್ನಾನಾಶ ಖಚಿತ ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಹಿಂದೆ ವೀರಶೈವ ಲಿಂಗಾಯತ ಧರ್ಮ, ನಂತರ ಮತಾಂತರದ ವಿಷಯ, ಗೋಹತ್ಯೆ ಈಗ ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸಿತ್ತು. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್, ಆದರೆ ಅಪವಾದ ಮಾತ್ರ ಬಿಜೆಪಿ ಮೇಲೆ ಹಾಕಿದೆ" ಎಂದಿದ್ದಾರೆ.
" ನಿಮಗೆ ಧಮ್ ಇದ್ದರೆ ಮಸೀದಿಗೆ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ಕೊಡಿಸಿ. ಹಿಜಾಬ್ ಹಾಕಿಕೊಂಡು ಅಧಿವೇಶನಕ್ಕೆ ಬರುವುದಲ್ಲ. ನೀವು ಮೊದಲು ಮಸೀದಿಗೆ ಹೋಗಿ. ಎಷ್ಟು ಜನ ಮಹಿಳೆಯರು ಮಸೀದಿಗೆ ಹೋಗಲು ಅವಕಾಶವಿದೆ? ಎಂದು ಕಾಂಗ್ರೆಸ್ ಶಾಸಕಿ ಖನೀಜಾ ಫಾತಿಮಾ ಹೇಳಿಕೆಗೆ ಇದೇ ವೇಳೆ ಸಚಿವರು ತಿರುಗೇಟು ನೀಡಿದರು.