ಕೊಟ್ಟಾಯಂ, ಫೆ 08 (DaijiworldNews/HR): ವಿಷಕಾರಿ ಹಾವು ಕಡಿದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉರಗ ರಕ್ಷಕ ವಾವಾ ಸುರೇಶ್ ಚೇತರಿಸಿಕೊಂಡು ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಾವಾ ಸುರೇಶ್ ಅವರು ಜನವರಿ 21 ರಂದು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ನಾಗರಹಾವು ಹಿಡಿದು ಚೀಲದಲ್ಲಿರಿಸಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಹಾವು ಸುರೇಶ್ ಅವರ ಕಾಲಿಗೆ ಕಚ್ಚಿದ್ದು, ಪ್ರಜ್ಞಾಹೀನರಾಗಿದ್ದ ಅವರನ್ನು ತಕ್ಷಣ ಕೊಟ್ಟಾಯಂ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿರಿಸಿ ಉಸಿರಾಡಲು ವೆಂಟಿಲೇಟರ್ ಬೆಂಬಲ ನೀಡಲಾಗಿತ್ತು.
ಇನ್ನು ಸಾಮಾನ್ಯವಾಗಿ ನಾಗರಹಾವು ಕಡಿದರೆ 25 ಬಾಟಲ್ ಪ್ರತಿರೋಧಕ ಔಷಧ ನೀಡಲಾಗುತ್ತದೆ. ಆದರೆ ವಾವಾ ಸುರೇಶ್ ಅವರಿಗೆ ವೈದ್ಯರು 65 ಬಾಟಲ್ ವಿಷ ಪ್ರತಿರೋಧಕ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ಬಾಲ್ಯದಿಂದಲೂ ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸುವುದರಲ್ಲಿ ವಾವಾ ಸುರೇಶ್ ಹೆಸರುವಾಸಿಯಾಗಿದ್ದು, ಇದುವರೆಗೂ 30 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ ಎನ್ನಲಾಗಿದೆ
ಇನ್ನು ಕೊನೆಗೂ ಅನೇಕ ಮಂದಿಯ ಪ್ರಾರ್ಥನೆಯಿಂದ ಸುರೇಶ್ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.