ಬೆಂಗಳೂರು, ಫೆ 07 (DaijiworldNews/KP): ಜಾತ್ಯಾತೀತ ವಿಚಾರದಲ್ಲಿ ದೇವೇಗೌಡರ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ಹಿರಿಯ ನಾಯಕ ವೈಎಸ್ ವಿ ದತ್ತಾ ಅವರು ಪರೋಕ್ಷವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನಲ್ಲಿರುವವರಿಗೆ ಈಗಲೂ ದೇವೇಗೌಡರ ಬಗ್ಗೆ ಆಶಾಭಾವನೆ ಇದೆ, ನಾನು 20 ವರ್ಷ ಹುಡುಗನಾಗಿಂದ ಅವರ ಜೊತೆ ಸೇರಿಕೊಂಡವನು, ನನಗೀಗ 69 ವರ್ಷ ಹಾಗಿರುವಾಗ ದೇವೇಗೌಡರ ಜೊತೆ ನನ್ನ ಸಂಪರ್ಕ ಎಷ್ಟರ ಮಟ್ಟಿಗೆ ಗಟ್ಟಿ ಇರಬಹುದು, ಆದರೆ ಕುಮಾರಸ್ವಾಮಿ ಬಗ್ಗೆ ನನ್ನ ಬಳಿ ಕೇಳಬೇಡಿ, ಅವರು ಪಕ್ಕಾ ಜಾತ್ಯಾತೀತವಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂದರು.
ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ, ನಮ್ಮ ಸಿದ್ದಾಂತದಲ್ಲಿ ಬದಲಾವಣೆ ಮಾಡದೇ ನಾವು ಪ್ರಾದೇಶಿಕ ಪಕ್ಷದಲ್ಲಿ ದುಡಿಯುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿ ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ಸಮಾನ ಅಂತರದಲ್ಲಿಟ್ಟುಕೊಳ್ಳಬೇಕು .ಆದರೆ ಕಮಲ ಪಕ್ಷದ ವಿರುದ್ದ ಮೃದು ದೋರಣೆ ಇಟ್ಟುಕೊಂಡಂತೆ ನನಗೆ ತೋರುತ್ತಿದೆ. ಇದೇ ವಿಚಾರವನ್ನು ನಾನು ಪಕ್ಷದೊಂದಿಗೂ ಚರ್ಚಿಸಿದ್ದೇನೆ ಎಂದರು.
ಇನ್ನು ರಾಗಿ ಬೆಳೆ ಖರೀದಿ ಕಡಿತಕ್ಕೆ ದತ್ತಾ ಅಸಮಾಧಾನ ವ್ಯಕ್ತಪಡಿಸಿದ ಅವರು, ಕರ್ನಾಟಕ ರಾಜ್ಯದ ಬಯಲು ಸೀಮೆಯ ರಾಗಿ ಬೆಳೆಗಾರರ ಸಮಸ್ಯೆ ಘನಘೋರವಾಗಿದೆ. ಸರ್ಕಾರದ ಆದೇಶದಿಂದ ರಾಗಿ ಬೆಳೆಗಾರ ರೈತರು ಕಷ್ಟದಲ್ಲಿದ್ದಾರೆ. ರೈತರು ವಿಧಾನಸೌಧಕ್ಕೆ ಬಂದರೂ ಸಮಸ್ಯೆ ಬಗೆಹರಿದಿಲ್ಲ. ಅಧಿವೇಶನದಲ್ಲಿ ಈ ವಿಚಾರ ಚರ್ಚೆ ಆಗಬೇಕು ಎಂಬುದು ರೈತರ ಬೇಡಿಕೆಯಾಗಿದೆ ಎಂದರು.