ತೀರ್ಥಹಳ್ಳಿ, ಫೆ 07 (DaijiworldNews/MS): ಹಿಜಾಬ್ ಇಲ್ಲವಾದರೇ ಕಾಲೇಜು ಬೇಡ ಅನ್ನುತ್ತಿರುವ ವಿದ್ಯಾರ್ಥಿಗಳ ಹೇಳಿಕೆಗಳ ಹಿಂದೆ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಬರುತ್ತಿದೆ. ಯಾಕೆಂದರೆ ಈ ಹಿಂದೆ ಇಲ್ಲದ ಹಿಜಾಬ್ ಒಲವು ಏಕಾಏಕಿ ಹೆಚ್ಚಾಗಿದ್ದು ಹೇಗೆ? ಇದರ ಹಿಂದಿರುವ ಕಾಣದ ಕೈಗಳ ಕೈವಾಡದ ವಿರುದ್ದ ತನಿಖೆ ನಡೆಸಬೇಕೆಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯ ಗುಡ್ಡೆಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ಯಾವುದೊ ವೇಷ ಧರಿಸಿಕೊಂಡು ಬರುತ್ತೇವೆ. ನನ್ನ ಧರ್ಮ ಇದು, ನನ್ನ ಧರ್ಮ ಅದು ಎಂದು ಹೇಳಲಾಗುವುದಿಲ್ಲ. ಕಾಲೇಜು ಆವರಣದಲ್ಲಿ ಕಾಲೇಜು ಆಡಳಿತ ನಿರ್ಧರಿಸಿರುವ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು. ವಿದ್ಯಾ ಕೇಂದ್ರಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವುದು ಸಾಧ್ಯವಿಲ್ಲ. ಸಮವಸ್ತ್ರ ಕಡ್ಡಾಯ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು ಎಂದರು.
ವಿದ್ಯಾ ದೇಗುಲದಲ್ಲಿ ಧರ್ಮವನ್ನು ಮೀರಿ ಭಾರತ ಮಾತೆಯ ಮಕ್ಕಳು ನಾವೆಲ್ಲ ಒಂದೇ ಎಂಬ ಭಾವನೆ ನಿರ್ಮಾಣವಾಗಬೇಕು. ಇಂಥ ಸಂಸ್ಕಾರ ಸಿಗುವ ಒಂದೇ ಒಂದು ವೇದಿಕೆ ಶಾಲೆ ಮತ್ತು ಕಾಲೇಜುಗಳು. ಸಮವಸ್ತ್ರ ಸಮಾನತೆಯ ಸಂಕೇತ, ಶಾಲಾ ಕಾಲೇಜುಗಳಲ್ಲಿ ಸಮಾನತೆ ಸಾರುವ ಕೆಲಸ ಆಗಬೇಕು . ಇನ್ನೇನು ಪರೀಕ್ಷೆ ಆರಂಭವಾಗಲಿದೆ, ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.