ಬೆಂಗಳೂರು, ಫೆ 06 (DaijiworldNews/KP): ಸಮಾಜದಲ್ಲಿ ಅಹಿತಕ ಘಟನೆ ನಡೆದಾಗ ಮಾತ್ರ ನಾನು ತಾಳ್ಮೆ ಕಳೆದುಕೊಳ್ಳುತ್ತೇನೆ ಇಲ್ಲದಿದ್ದರೆ ನಾನು ಯಾವಗಲೂ ಕೂಲ್ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರವಷ್ಟೆ ಅಲ್ಲ ಎಲ್ಲಾ ದಿನಗಳಲ್ಲೂ ನಾನು ಕೂಲ್ ಆಗಿರುತ್ತೇನೆ, ಆದರೆ ಸಮಾಜದಲ್ಲಿ ಆಹಿತಕರ ಘಟನೆ ನಡೆದಾಗ ಮಾತ್ರ ತಾಳ್ಮೆ ಕಳೆದುಕೊಳ್ಳುವುದಾಗಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪಕ್ಷ ಉಚ್ಚಟನೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಒಳ್ಳೆಯ ಸ್ನೇಹಿತ, ನನ್ನ ಪ್ರಕಾರ ಅವರು ಕಾಂಗ್ರೆಸ್ ತೊರೆಯುವುದಿಲ್ಲ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿಲ್ಲ ಎಂದು ಕೋಪದಲ್ಲಿದ್ದಾರೆ. ಕೋಪ ತಣ್ಣಗಾದ ಮೇಲೆ ಅವರ ಜೊತೆ ಮಾತನಾಡುತ್ತೇನೆ. ಈ ನಡುವೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸಿ.ಎಂ.ಇಬ್ರಾಹಿಂ ಅವರೊಂದಿಗೆ ಮಾತುಕತೆ ನಡೆಸಿ ಮನವೋಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ನಲ್ಲಿ ನಾನು ಖುಷಿಯಾಗಿಲ್ಲ, ವಿಚಲಿತನಾಗಿದ್ದೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿರುವುದನ್ನು ಸಹಿಸುವುದಿಲ್ಲ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಅವರಿಗೆ ನಾನು ಹಾಗೆ ಕಂಡಿರಬಹುದು. ಇಬ್ರಾಹಿಂ ವಿರೇಂದ್ರ ಪಾಟೀಲರ ಜೊತೆ ಕಾಂಗ್ರೆಸ್ಗೆ ಸೇರಿದ್ದು, ನಾನು ಆಗ ಪಕ್ಷದಲ್ಲಿ ಇರಲಿಲ್ಲ, ಹಾಗಿರುವಾಗ ಆ ವೇಳೆ ಅವರಿಗಾದ ಅನ್ಯಾಯದ ಬಗ್ಗೆ ನನಗೆ ತಿಳಿದಿಲ್ಲ. ಇಬ್ರಾಹಿಂ ಅಹಿಂದ ಸಮಾವೇಶ ಮಾಡುತ್ತಾರೋ ಅಥವಾ ಇನ್ನೇನು ಮಾಡುತ್ತಾರೋ ನನಗೆ ಸಂಬಂಧಿಸಿಲ್ಲ ಎಂದರು.
ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ, ಎಲ್ಲರಿಗೂ ಅವರೇ ಟಿಕೆಟ್ ಕೊಡಿಸಲು ಹೇಗೆ ಸಾಧ್ಯ, ಅಲ್ಲದೆ ಇಬ್ರಾಹಿಂ ಅಹಿಂದ ಸಮಾವೇಶ ಮಾಡುತ್ತಾರೋ ಅಥವಾ ಇನ್ನೇನು ಮಾಡುತ್ತಾರೋ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ಇನ್ನು ರಾಹುಲ್ ಗಾಂಧಿಯ ಸಲಹೆಗಾರರಾದ ರಾಜು ಅವರು ಬೆಂಗಳೂರಿಗೆ ಆಗಮಿಸಿ, ನಿನ್ನೆ ತಮ್ಮ ಮನೆಗೂ ಭೇಟಿ ನೀಡಿದ್ದರು. ಇದೊಂದು ಸೌಜನ್ಯದ ಭೇಟಿಯಷ್ಟೆ. ಹೈಕಮಾಂಡ್ ತಮಗೆ ಯಾವ ಸಂದೇಶವನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.