ನವದೆಹಲಿ, ಫೆ 06 (DaijiworldNews/KP): ಹಿರಿಯ ಗಾಯಕಿ, ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್ (92) ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕೊರೊನಾ ದೃಢಪಟ್ಟ ಹಿನ್ನಲೆ ಚಿಕಿತ್ಸೆಗಾಗಿ ಲತಾ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಅಸ್ಪತ್ರೆಗೆ ಜನವರಿ 8ರಂದು ದಾಖಲಿಸಲಾಗಿದ್ದು, ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಲತಾ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡು ಸರಣಿ ಟ್ವೀಟ್ ಮಾಡಿದ್ದು, ’ದಯೆ ಮತ್ತು ಕಾಳಜಿಯ ಪ್ರತಿರೂಪದಂತಿದ್ದ ಲತಾ ದೀದಿಯ ಅಗಲಿಕೆಯ ದುಃಖವನ್ನು ನಾನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ, ಅವರ ಅಗಲಿಯಿಂದ ಉಂಟಾದ ಶೂನ್ಯವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರ ಮಧುರ ಧ್ವನಿಗೆ ಜನರನ್ನು ಮಂತ್ರಮುಗ್ಧರನ್ನಾಗಿಸುವ ಅಪ್ರತಿಮ ಶಕ್ತಿಯಿತ್ತು. ಲತಾ ಅವರು ಭಾರತೀಯ ಸಂಸ್ಕೃತಿಯ ಬಲಾಡ್ಯ ಪ್ರತಿನಿಧಿಯಾಗಿದ್ದರು. ಮುಂದಿನ ಪೀಳಿಗೆಯು ಕೂಡ ಅವರ ನೆನಪಲ್ಲಿ ಸದಾ ಇರುತ್ತದೆ’ ಎಂದರು.
ಲತಾ ದೀದಿ ಅವರ ಹಾಡುಗಳು ವಿವಿಧ ಭಾವನೆಗಳನ್ನು ತಂದವು. ದಶಕಗಳ ಕಾಲ ಭಾರತೀಯ ಚಲನಚಿತ್ರದಲ್ಲದ ಪರಿವರ್ತನೆಯನ್ನು ಹತ್ತಿರದಿಂದ ನೋಡಿದವರು. ಸಿನೆಮಾ ಕ್ಷೇತ್ರದಿಂದ ಆಚೆ, ಭಾರತದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದರು, ಅವರು ಯಾವಾಗಲೂ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸುತ್ತಿದ್ದರು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
’ಲತಾ ಜೀ ಅವರ ನಿಧನವು ನನ್ನ ಹೃದಯವನ್ನು ಚುರು ಮಾಡಿದೆ, ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಇದೇ ಅನುಭವ ಆಗಿದೆ. ಲತಾ ಅವರು ತಮ್ಮ ಹಾಡುಗಳ ಮೂಲಕ ಭಾರತದ ಸಾರ ಮತ್ತು ಸೌಂದರ್ಯವನ್ನು ನಿರೂಪಿಸಿದ್ದಾರೆ. ಅವರ ಸಾಧನೆಯ ಅಜಾರಾಮವಾಗಿ ಉಳಿಯುತ್ತವೆ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ’ ಸಂಗೀತ ಕ್ಷೇತ್ರಕ್ಕೆ ಲತಾ ದೀದಿಯವರ ಕೊಡುಗೆ ಅಪಾರ ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಅವರು ತಮ್ಮ ಸುಮಧುರ ಕಂಠದ ಮೂಲಕ ಲಕ್ಷಾಂತರ ಜನರಿಗೆ ಮೋಡಿ ಮಾಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಭಾರತೀಯ ಸಂಗೀತದ ಮಾಧುರ್ಯವನ್ನು ಪಸರಿಸಿದ್ದಾರೆ’ ಎಂದರು.
’ಕಾಲಕಾಲಕ್ಕೆ ಲತಾದೀದಿಯ ವಾತ್ಸಲ್ಯ ಮತ್ತು ಆರ್ಶೀವಾದವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಅಪ್ರತಿಮ ದೇಶಭಕ್ತಿ, ಮಧುರವಾದ ಮಾತು, ಸಜ್ಜನಿಕೆ ಇದ್ದಂತಹ ವ್ಯಕ್ತಿ, ಆದರೆ ಈಗ ಅವರ ನೆನಪುಗಳು ಸದಾ ನಮ್ಮೊಂದಿಗಿರುತ್ತದೆ, ದೇವರು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ’ ಎಂದು ಶಾ ಸಂತಾಪ ಸೂಚಿಸಿದ್ದಾರೆ.
’ ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಲತಾ ಅವರ ಧ್ವನಿಯು ಅಮರವಾಗಿ ಅಭಿಮಾನಿಗಳ ಹೃದಯದಲ್ಲಿ ಸದಾ ಪ್ರತಿಧ್ವನಿಸುತ್ತಲೇ ಇರುತ್ತದೆ, ಅವರ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಸಂತಾಪ ವ್ಯಕ್ತಪಡಿಸಿದ್ದು, ’ಲತಾ ಜೀ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಅವರ ಸುಮಧುರ ಹಾಡುಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಮುಟ್ಟಿದ್ದವು. ನಿಮ್ಮ ಸಂಗೀತ ಮತ್ತು ನೆನಪುಗಳಿಗೆ ಧನ್ಯವಾದಗಳು. ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು’ ಎಂದಿದ್ದಾರೆ.
’ಲತಾ ದೀದಿ ಅವರ ನಿಧನದೊಂದಿಗೆ ಸಂಗೀತದ ಸದ್ದುಗಳು ಮೌನವಾಗಿದೆ. ಹಲವಾರು ತಲೆಮಾರುಗಳ ಭಾರತೀಯರು ನಿಮ್ಮ ಅಪ್ರತಿಮ ಸುಮಧುರ ದ್ವನಿಯಲ್ಲಿ ಮೂಡಿಬಂದ ಹಾಡುಗಳನ್ನು ಕೇಳುತ್ತಾ ಬೆಳೆದಿದ್ದಾರೆ. ಓಂ ಶಾಂತಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.