ಮುಂಬೈ, ಫೆ 06 (DaijiworldNews/HR): ಭಾರತ ರತ್ನ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರು ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಲತಾ ಮಂಗೇಶ್ವಕರ್ ಅವರಿಗೆ ಜನವರಿ 8ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಬಳಿಕ ಅವರಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
1929ರಲ್ಲಿ ಲತಾ ಮಂಗೇಶ್ಕರ್ ಅವರು ಇಂದೋರ್ ನಲ್ಲಿ ಜನಿಸಿದ್ದು, ಲತಾ ಅವರು ಪ್ರಾಥಮಿಕವಾಗಿ ಹಿಂದಿ ಮತ್ತು ಮರಾಠಿಭಾಷೆಗಳಲ್ಲಿದ್ದರೂ ಮೂವತ್ತಾರು ಕ್ಕೂ ಹೆಚ್ಚು ಭಾರತೀಯ ಭಾಷೆಗಳು ಮತ್ತು ಕೆಲವು ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
1989ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಲತಾ ಮಂಗೇಶ್ಕರ್ ಅವರಿಗೆ ಭಾರತ ಸರ್ಕಾರ ನೀಡಿದ್ದು, 2001ರಲ್ಲಿ ದೇಶಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಲಾಯಿತು,
ಇನ್ನು ಫ್ರಾನ್ಸ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆಫೀಸರ್ ಆಫ್ ದಿ ಲೆಜಿಯನ್ ಆಫ್ ಆನರ್ ಅನ್ನು ಕೂಡ ಲತಾ ಮಂಗೇಶ್ಕರ್ ಅವರಿಗೆ 2007ರಲ್ಲಿ ಪ್ರದಾನ ಮಾಡಿತು.