ಅಮೃತಸರ, ಫೆ 06 (DaijiworldNews/KP): ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಒಂದಲ್ಲ ಹತ್ತು ಮಂದಿ ಸಿಎಂ ಅಭ್ಯರ್ಥಿಯನ್ನು ಘೋಷಿಸಿದರು ಪಂಜಾಬ್ನಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭಗವಂತ್ ಮಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿದ್ದು, ಮತದಾರರು ನನ್ನ ಮೇಲೆ ಹೆಚ್ಚು ವಿಶ್ವಾಸವಿಟ್ಟುಕೊಂಡಿದ್ದಾರೆ, ನೀವೆಲ್ಲರೂ ಪ್ರಜಾಪ್ರಭುತ್ವದ ಹಬ್ಬವನ್ನು ನೋಡಲು ಬಯಸಿದರೆ, ಒಮ್ಮೆ ಪಂಜಾಬ್ಗೆ ಬಂದು ನಮ್ಮ ಪಕ್ಷದ ರ್ಯಾಲಿಯನ್ನು ನೋಡಿ, ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇನ್ನು ಕಾಂಗ್ರೆಸ್ನವರು ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ ಏನು ಫಲ ಎಂದು ವ್ಯಂಗ್ಯವಾಡಿದರು.
ತಮಗೆ ನೀಡಿದ ಭದ್ರತೆಯ ಕುರಿತು ಮಾತನಾಡಿದ ಅವರು, ಸಂಸದನಾಗಿ ಇರುವ ಭದ್ರತೆಯೇ ಸಾಕು, ಸರ್ಕಾರ ಹೆಚ್ಚಿನ ಭದ್ರತೆ ಒದಗಿಸುವುದಾಗಿ ಹೇಳಿದ್ದರು, ಆದರೆ ಆ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ ಎಂದರು.
ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಂಜಾಬ್ಗೆ ಭೇಟಿ ನೀಡಲಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.