ಬೆಂಗಳೂರು, ಫೆ 06 (DaijiworldNews/HR): ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸೇರುವುದಾಗಿ ನಿರ್ಧರಿಸಿದ್ದೇನೆ. ಆದರೆ ದಿನಾಂಕ ಇನ್ನೂ ತೀರ್ಮಾನ ಮಾಡಿಲ್ಲ. ಈಗಾಗಲೇ ಮೈಸೂರು, ಬೆಂಗಳೂರಿನಲ್ಲಿ ಮುಖಂಡರ ಸಭೆ ನಡೆಸಿದ್ದು, ಹುಬ್ಬಳ್ಳಿಯೂ ಸಭೆ ನಡೆಸಲಿದ್ದೇನೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಲಿದ್ದೇನೆ ಎಂದರು.
ನನಗೆ ಸಮಾಜವಾದಿ ಪಕ್ಷದಿಂದಲೂ ಆಹ್ವಾನ ಇತ್ತು. ಆದರೆ ಮುಖಂಡರ ಜತೆ ಚರ್ಚಿಸಿದಾಗ ಬಹುತೇಕರು ಜೆಡಿಎಸ್ ಬಗೆ ಹೆಚ್ಚು ಒಲವು ವ್ಯಕ್ತವಾಯಿತು. ಹೀಗಾಗಿ ಜೆಡಿಎಸ್ ಸೇರ್ಪಡೆಗೆ ಮಂದಾಗಿದ್ದೇನೆ ಎಂದಿದ್ದಾರೆ.
ಇನ್ನು ಅಲ್ಪಸಂಖ್ಯಾತ, ಲಿಂಗಾಯಿತ ಹಾಗೂ ಗೌಡರನ್ನು ಒಂದಾಗಿಸಬೇಕು. ಬಿಜಾಪುರದಿಂದ ಸಮಾವೇಶ ಆರಂಭಿಸಲಾಗುವುದು. ಸ್ವಾಮಿಜಿಗಳೇ ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದರು.
ಯಡಿಯೂರಪ್ಪ ಅವರೊಂದಿಗೂ ಮಾತನಾಡಿದ್ದೇನೆ. ಯಡಿಯೂರಪ್ಪ ಅವರ ಶಕ್ತಿ ಬಿಜೆಪಿಯಲ್ಲಿ ದಿನೇ ದಿನೇ ಕ್ಷೀಣ ಆಗುತ್ತಿದೆ. ಅವರು ಧೈರ್ಯ ಮಾಡಬೇಕು. ಹರಹರ ಮಹಾದೇವ ಅಂತಾ ಹೊರಗೆ ಬರಬೇಕು ಎಂದು ಹೇಳಿದ್ದಾರೆ.