ಶ್ರೀನಗರ, ಫೆ 05 (DaijiworldNews/HR): ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.
ಮೃತಪಟ್ಟಿರುವ ಭಯೋತ್ಪಾದಕರನ್ನು ದಕ್ಷಿಣ ಕಾಶ್ಮೀರದ ನಿವಾಸಿಗಳು ಇಖ್ಲಾಕ್ ಅಹ್ಮದ್ ಹಜಾಮ್ ಮತ್ತು ಆದಿಲ್ ನಿಸಾರ್ ದಾರ್ ಎಂದು ಗುರುತಿಸಲಾಗಿದೆ.
ಶ್ರೀನಗರದ ರಂಗಪೋರಾ ಜಕುರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ರಂಗ್ಪೋರಾ ಜಕುರಾ ಪ್ರದೇಶದಲ್ಲಿ ಭಯೋತ್ಪಾದಕರ ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಶ್ರೀನಗರ ಪೊಲೀಸರು ಈ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಇನ್ನು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗ ಭಯೋತ್ಪಾದಕರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ನಂತರ ಎನ್ಕೌಂಟರ್ ನಡೆದಿದ್ದು, ಎನ್ಕೌಂಟರ್ನಲ್ಲಿ, ಇಬ್ಬರು ಉಗ್ರರನ್ನು ಕೊಲ್ಲಲಾಯಿತು ಮತ್ತು ಅವರ ಶವಗಳನ್ನು ಎನ್ಕೌಂಟರ್ ಸ್ಥಳದಿಂದ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.